ಬೆಂಗಳೂರು: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಜೊತೆಗಿನ ಸಭೆಯಲ್ಲಿ ತಾಯಿ ಮತ್ತು ಶಿಶು ಮರಣ ದರದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಮರಣ ಪ್ರಮಾಣವನ್ನು ಕಡಿಮೆ ಮಾಡುವಂತೆ ಸಿಎಂ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಸಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಮರಣ ಪ್ರಮಾಣ ಇಳಿಕೆ ಮಾಡುವಂತೆ ತಾಕೀತು ಮಾಡಲಾಯಿತು. ಇತರ ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನವಜಾತ ಶಿಶು ಹಾಗೂ ತಾಯಿಯಂದಿರ ಮರಣ ಪ್ರಮಾಣ ಹೆಚ್ಚಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಯಾವ ಆಸ್ಪತ್ರೆಗಳಲ್ಲಿ ಹೆಚ್ಚಿನ ಹೊರೆಯಾಗುತ್ತಿದೆ, ಎಲ್ಲಿ ಸೌಲಭ್ಯವಿದ್ದರೂ ಜನ ಬರುತ್ತಿಲ್ಲ ಎಂದು ವಿಸ್ತೃತ ಸಮೀಕ್ಷೆ ಮಾಡಿ, ಕಾರಣಗಳನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಿ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು ಅಂತಾ ಮಾಧುಸ್ವಾಮಿ ನಡೆದ ಸಭೆ ಬಗ್ಗೆ ವಿವರಿಸಿದರು.
ಸಭೆಯಲ್ಲಿ ನೀಡಿದ ಸೂಚನೆಗಳೇನು:
- ಜಲಜೀವನ್ ಮಿಷನ್ ಯೋಜನೆಯಡಿ ಬ್ಯಾಚ್ 1 ಹಾಗೂ 2ರ ಕಾಮಗಾರಿಗಳು ಪ್ರಾರಂಭವಾಗಿದೆ. ಬ್ಯಾಚ್ 1ರಡಿ ಶೇ. 88 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು.
- ಜಲಜೀವನ್ ಮಿಷನ್ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಯೋಜನೆಯ ಪ್ರಗತಿಯನ್ನು ನಿಯಮಿತವಾಗಿ ಪ್ರತಿ ತಿಂಗಳು ಪರಿಶೀಲಿಸಲು ಸೂಚಿಸಲಾಯಿತು.
- ಶಾಲಾ ಕಟ್ಟಡ ಮತ್ತಿತರ ಸಾರ್ವಜನಿಕರ ಬಳಕೆಯ ‘ಕಾಮಗಾರಿಗಳನ್ನು, ಚರಂಡಿ ವ್ಯವಸ್ಥೆ ಮೊದಲಾದ ಮೂಲಸೌಕರ್ಯಗಳನ್ನು ಮಹಾತ್ಮಾ ಗಾಂಧಿ ನರೇಗಾ ಅಡಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.
- ರಾಜ್ಯದ 5,946 ಪಂಚಾಯಿತಿಗಳ ಪೈಕಿ 5,200 ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯಾರಂಭ ಮಾಡಿದೆ. ಉಳಿದ ಪಂಚಾಯಿತಿಗಳಲ್ಲಿಯೂ ಶೀಘ್ರವೇ ಪ್ರಾರಂಭಿಸಲು ಸೂಚಿಸಿದರು.
- ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಮಂಜೂರಾದ ಕಾಮಗಾರಿಗಳನ್ನು ಈ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. 5 ಸಾವಿರ ಕೋಟಿ ರೂ.ಗಳ ಕಾರ್ಯಕ್ರಮ ಇದಾಗಿದ್ದು, ಮಾರ್ಚ್ 31ರೊಳಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಖ್ಯ ಮಂತ್ರಿಗಳು ಸೂಚಿಸಿದರು.
- ನವೆಂಬರ್ 14 ರೊಳಗೆ ಶಾಲಾ ಕೊಠಡಿಗಳ ನಿರ್ಮಾಣ ಪ್ರಾರಂಭವಾಗಬೇಕು ಎಂದು ಸೂಚಿಸಿದರು. ಅಮೃತ ಶಾಲಾ ಸೌಲಭ್ಯ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟವನ್ನೂ ಖಾತರಿಪಡಿಸಬೇಕು. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯನ್ನು ಆಗಸ್ಟ್ 15ರಂದು ಘೋಷಿಸಲಾಗಿದ್ದು, ಶೀಘ್ರವೇ ಬೇಡಿಕೆಯನ್ನು ಗುರುತಿಸಿ, ಯೋಜನೆ ರೂಪಿಸಲು ಸೂಚಿಸಿದರು.
- ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮ ಗಂಟು ರೋಗ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಜಿಲ್ಲಾ ಪಂಚಾಯತ್ನಲ್ಲಿ 30 ಕೋಟಿ ರೂ. ಗಳಷ್ಟು ಅನುದಾನ ಲಭ್ಯವಿದ್ದು, ಅದರಲ್ಲಿ ಲಸಿಕೆ, ಔಷಧಿ ಹಾಗೂ ಪೌಷ್ಟಿಕ ಆಹಾರದ ವೆಚ್ಚ ಭರಿಸಲು ಸೂಚಿಸಿದರು.
ಇದನ್ನೂ ಓದಿ:ಮೇಲ್ಮನವಿ ಸಲ್ಲಿಸಿ ಕಾನೂನು ನೆರವು ನೀಡಿರುವ ಕೈದಿಗಳ ವಿವರ ಸಲ್ಲಿಸಲು ಹೈಕೋರ್ಟ್ ಸೂಚನೆ