ಬೆಂಗಳೂರು :ವಿಶ್ವದಲ್ಲಿ ಎರಡು ಸಾವಿರ ವರ್ಷಗಳಲ್ಲಿ ಸಂಭವಿಸಿದಷ್ಟು ಪರಿಸರ ಹಾನಿ ಕಳೆದ 20 ವರ್ಷಗಳಲ್ಲಿ ಸಂಭವಿಸಿದೆ. ಆದ್ದರಿಂದ ನಾವು ಜಾಗೃತರಾಗಿ ಪರಿಸರ ರಕ್ಷಣೆಯನ್ನು ತುರ್ತು ಆದ್ಯತೆಯಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ವರದಿ, ಬೆಂಗಳೂರು ಪರಿಸರ ಕುರಿತು ವರದಿ, ಪರಿಸರ ವಾಹಿನಿ ಪತ್ರಿಕೆ ಹಾಗೂ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಸಿಎ ಬೊಮ್ಮಾಯಿ ಮಾತನಾಡಿದರು.
ಪರಿಸರ ಸಂರಕ್ಷಣೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಸಮಾಜದ ಒಂದು ಭಾಗವಾಗಿ ಕೆಲಸ ಮಾಡಬೇಕು. ಸಮಾಜದ ಎಲ್ಲಾ ವರ್ಗಗಳು, ಪರಿಸರ ರಕ್ಷಣೆಗೆ ಅನುಸರಿಸಬೇಕಾದ ಉತ್ತಮ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು.
ಮಕ್ಕಳು, ಯುವಕರು, ವಿವಿಧ ಕೈಗಾರಿಕೋದ್ಯಮ, ವಿವಿಧ ವಲಯಗಳಲ್ಲಿ ಕೆಲಸ ಮಾಡುವವರು ಹಾಗೂ ಸರ್ಕಾರ ಅನುಸರಿಸಬೇಕಾದ ಉತ್ತಮ ಪದ್ಧತಿಗಳ ಕುರಿತು ಅರಿವು ಮೂಡಿಸಬೇಕು. ನೈಸರ್ಗಿಕ ಸಂಪತ್ತನ್ನು ಪೋಲು ಮಾಡಬಾರದು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮರು ಬಳಕೆಗೆ ಅನುಸರಿಸಬಹುದಾದ ಸರಳ ವಿಧಾನಗಳನ್ನು ಜನಪ್ರಿಯಗೊಳಿಸಬೇಕು ಎಂದರು.
ಬೆಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಒಂದು ದೊಡ್ಡ ಸವಾಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಶೇ. 60-65 ರಷ್ಟು ತ್ಯಾಜ್ಯ ಹಸಿ ತ್ಯಾಜ್ಯವಾಗಿದ್ದು, ಇವುಗಳನ್ನು ಸಣ್ಣ ಸಣ್ಣ ಸಂಸ್ಕರಣಾ ಘಟಕಗಳಲ್ಲಿ ಸ್ಥಳೀಯವಾಗಿ ಗೊಬ್ಬರವಾಗಿ ಪರಿವರ್ತಿಸಿ ಬಳಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಇದರ ಪರಿಣಾಮದ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯವನ್ನು ನಿರ್ವಹಿಸುತ್ತಿರುವ ನಗರ ಸ್ಥಳೀಯ ಸಂಸ್ಥೆ ಮತ್ತಿತರ ಸರ್ಕಾರಿ ಸಂಸ್ಥೆಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಬಳಿಕ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಶಾಂತ್ ಎ. ತಿಮ್ಮಯ್ಯ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮಂಡಳಿ ಕಾರ್ಯದರ್ಶಿ ಶ್ರೀನಿವಾಸುಲು ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೋವಿಡ್ ಮೂರನೇ ಅಲೆಯಲ್ಲಿ ಹೆಚ್ಚು ಮಂದಿ ಸೋಂಕಿತರು ಯುವಕರು : ಐಸಿಎಂಆರ್