ಕೆಆರ್‌ಪುರ :ಇಂದು ಸಿಎಂ ಬಸವರಾಜ್ ಬೊಮ್ಮಾಯಿಯವರು 50 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸಿದರು.
ಕೆಆರ್ ಪುರಂನಲ್ಲಿ ತಾಯಿ-ಮಕ್ಕಳ ಆಸ್ಪತ್ರೆಗೆ ಸಿಎಂ ಶಂಕುಸ್ಥಾಪನೆ ನಂತರ ಕೋವಿಡ್ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ಸಿಎಂ, ಕೆಆರ್ ಪುರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಚಿವ ಭೈರತಿ ಬಸವರಾಜ್ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.
ಇಲ್ಲಿನ ಜಗದೀಶ್ ನಗರದಲ್ಲಿ 8.5 ಕೋಟಿ ವೆಚ್ಚದಲ್ಲಿ ನೆಲಮಟ್ಟದ ನೀರು ಸಂಗ್ರಹಣಾಗಾರ ನಿರ್ಮಾಣ ಮಾಡಲಾಗಿದೆ. ಕೆಆರ್‌ಪುರ ಭಾಗದಲ್ಲೇ ಪ್ರಮುಖ ನೆಲ ಮಟ್ಟದ ನೀರು ಸಂಗ್ರಹಣಗಾರವಾಗಿದೆ. ಇದು 9 ಪ್ರಮುಖ ಭಾಗಗಳಿಗೆ ನೀರು ಪೂರೈಕೆ ಮಾಡುವ ಬೃಹತ್ ಯೋಜನೆಯಾಗಿದೆ ಎಂದರು.
ಕೋವಿಡ್ನಿಂದ ಮೃತರಾದ ಕುಟುಂಬಗಳಿಗೆ ಸಾಂತ್ವನ,ಧೈರ್ಯ ತುಂಬುವ ನಿಟ್ಟಿನಲ್ಲಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಸರ್ಕಾರ ರಾಜ್ಯದ ಜನರ ಪರ ನಿಂತು ಪ್ರಮಾಣಿಕವಾಗಿ ಶ್ರಮಿಸಲಿದೆ ಎಂದರು.
ನಂತರ ಆರೋಗ್ಯ ಸಚಿವ ಡಾ .ಕೆ.ಸುಧಾಕರ್ ಮಾತನಾಡಿ, ಕೆಆರ್ ಪುರ ಕ್ಷೇತ್ರದಲ್ಲಿ ನೂತನ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವುದು ರಾಜ್ಯ ಸರ್ಕಾರ ಈ ಭಾಗಕ್ಕೆ ನೀಡುತ್ತಿರುವ ಕೊಡುಗೆಯಾಗಿದೆ. ಕೆಆರ್‌ಪುರ ಸುತ್ತಮುತ್ತಲಿನ 80 ಕಿ.ಮೀ.ನಲ್ಲಿ ತಾಯಿ , ಮಕ್ಕಳ ಆಸ್ಪತ್ರೆ ಕೊರತೆ ಇತ್ತು.
ಒಂದೂವರೆ ವರ್ಷ ಹಿಂದೆ ಸಚಿವ ಭೈರತಿ ಬಸವರಾಜ್ ಅವರ ಜೊತೆ ಚರ್ಚೆ ಮಾಡಲಾಗಿತ್ತು. ಇಂದು ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಲಾಗಿದೆ. ಇದರಿಂದ ಕೋಲಾರದಿಂದ ಬೆಂಗಳೂರಿಗೆ ಬರುವವರಿಗೆ ಸಹಾಯಕವಾಗಲಿದೆ ಎಂದರು.
ಈವರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಮಾತ್ರ ಆಕ್ಸಿಜನ್ ವೆಂಟಿಲೇಟರ್ ಸೌಲಭ್ಯ ನೀಡಲಾಗುತ್ತಿತ್ತು. ಈಗ ಪ್ರತಿ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೆಆರ್ ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯಲ್ಲಿ ಸಾಮಾನ್ಯ ಬೆಡ್ಗೆ ನಿಗದಿಪಡಿಸಿ ಬಾಕಿ 50 ಹಾಸಿಗೆಗಳು ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಕೊಡುಗೆ ನೀಡಿದ್ದಾರೆ. ಪಿಪಿಸಿ ಮಾದರಿ ಆಸ್ಪತ್ರೆ ನಿರ್ಮಾಣ, ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಪೂರ್ವ ಭಾಗದಲ್ಲಿ ತಲೆ ಎತ್ತಲಿದೆ ಎಂದರು.
ಇದನ್ನೂ ಓದಿ: ನಾ ಮನೆಯಲ್ಲಿ ರಾಜಕೀಯ ಮಾಡಲ್ಲ : ಮೇಕೆದಾಟು ಅಭಿವೃದ್ಧಿ ಸಂಬಂಧ ಆನಂದ್ ಸಿಂಗ್ ಜತೆ ಮಾತನಾಡಿದ್ದೇನೆ : ಡಿಕೆಶಿ
ಬಳಿಕ ಸಚಿವ ಭೈರತಿ ಬಸವರಾಜ್ ಮಾತನಾಡಿ, 50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಾಯಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಆರ್ ಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದ್ದು, ಮಹದೇವಪುರ ವಲಯದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನೂತನ ಆಸ್ಪತ್ರೆ ನಿರ್ಮಾಣ ಮಾಡಲು ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸಹಕರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ್, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ವಿಧಾನಪರಿಷತ್ ಸದಸ್ಯ ಹೆಚ್.ಎಸ್. ಗೋಪಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ