ಕರ್ನಾಟಕ

karnataka

ETV Bharat / state

ಹೆಚ್ಚುವರಿ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ‌ ಸಿದ್ಧತೆ: ಪ್ರಸಕ್ತ ರಾಜ್ಯದ ಆರ್ಥಿಕ ಸ್ಥಿತಿಗತಿ ಏನಿದೆ? - buisness

ಎರಡನೇ ಬಾರಿ ಬಜೆಟ್​​ ಮಂಡನೆಗೆ ಸಿಎಂ ಬೊಮ್ಮಾಯಿ ತಯಾರಿ - ಆದಾಯ ಮೂಲಗಳಲ್ಲಿ ಚೇತರಿಕೆ - ಜಿಎಸ್​ಟಿ ಪರಿಹಾರ ಇಲ್ಲದೇ ಈ ಬಾರಿ ಬಜೆಟ್ ಸಿದ್ಧತೆ.

cm-bommai-is-preparing-to-present-the-additional-budget
ಹೆಚ್ಚುವರಿ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ‌ ಸಿದ್ಧತೆ: ಆದರೆ ಪ್ರಸಕ್ತ ರಾಜ್ಯದ ಆರ್ಥಿಕ ಸ್ಥಿತಿಗತಿ ಏನಿದೆ?

By

Published : Jan 7, 2023, 3:12 PM IST

ಬೆಂಗಳೂರು: ಸಿಎಂ ಬೊಮ್ಮಾಯಿ 2023-24 ಸಾಲಿನ ಬಜೆಟ್ ಮಂಡನೆಗೆ ತಯಾರಿ ಪ್ರಾರಂಭಿಸಿದ್ದಾರೆ.‌ ಚುನಾವಣೆ ವರ್ಷದ ಬಜೆಟ್ ಇದಾಗಿರಲಿದ್ದು, ಜನಪ್ರಿಯ ಘೋಷಣೆಗಳೊಂದಿಗೆ ಪೂರ್ಣಪ್ರಮಾಣದ ಆಯವ್ಯಯ ಮಂಡನೆಗೆ ಪೂರ್ವಸಿದ್ಧತೆ ನಡೆಸಲಾಗುತ್ತಿದೆ. ಅತಿ ಗರಿಷ್ಠ ಬದ್ಧ ವೆಚ್ಚ, ಜಿಎಸ್​ಟಿ ಪರಿಹಾರ ಇಲ್ಲದೇ ಈ ಬಾರಿ ಬಜೆಟ್ ತಯಾರಿ ನಡೆಸಲಾಗುತ್ತಿದೆ.

ಸಿಎಂ ಬೊಮ್ಮಾಯಿ‌ ತಮ್ಮ ಎರಡನೇ ಬಜೆಟ್ ಮಂಡನೆಗೆ ತಯಾರಿ ಆರಂಭಿಸಿದ್ದಾರೆ. ಈ ವರ್ಷ ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಈ ಬಾರಿ ಚುನಾವಣಾ ಬಜೆಟ್ ಮಂಡನೆಯಾಗುವುದು ಬಹುತೇಕ ಖಚಿತ. ಈ ಬಾರಿ ಪೂರ್ಣಪ್ರಮಾಣ ಹಾಗೂ ಹೆಚ್ಚುವರಿ ಬಜೆಟ್ ಮಂಡನೆ ಮಾಡಲು ಪೂರ್ಣ ಸಿದ್ಧತೆ ನಡೆಸಲಾಗುತ್ತಿದೆ. ಆದಾಯ ಮೂಲಗಳಲ್ಲಿ ಚೇತರಿಕೆ ಕಂಡಿರುವ ಕಾರಣ ತೆರಿಗೆ ಸಂಗ್ರಹ ಬಜೆಟ್ ಅಂದಾಜು ಮೀರಿ ಕ್ರೋಢೀಕರಣವಾಗುತ್ತಿರುವುದು ಸಿಎಂ ಬೊಮ್ಮಾಯಿಗೆ ನಿಟ್ಟುಸಿರು ಬಿಡುವಂತಾಗಿದೆ. ಈಗಾಗಲೇ ಸಿಎಂ ಬೊಮ್ಮಾಯಿ‌ ಬಜೆಟ್ ಪೂರ್ವಸಿದ್ಧತೆ ಆರಂಭಿಸಿದ್ದಾರೆ. ಮುಂದಿನ ವಾರದಿಂದ ಇಲಾಖಾವಾರು ಬಜೆಟ್ ಪೂರ್ವ ಸಿದ್ಧತಾ ಸಭೆ ಆರಂಭವಾಗಲಿದೆ.

ರಾಜ್ಯದ ಸದ್ಯದ ಆರ್ಥಿಕ ಸ್ಥಿತಿಗತಿ ಏನಿದೆ?:2022-23 ಸಾಲಿನಲ್ಲಿ ರಾಜ್ಯ ಸರ್ಕಾರ ವಿತ್ತೀಯ ಕೊರತೆಯನ್ನು ಶೇ 2.82ಕ್ಕೆ ಸೀಮಿತಗೊಳಿಸಿದೆ. ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಅಂದಾಜು ಮೀರಿ ಆದಾಯ ಸಂಗ್ರಹ ಮಾಡುತ್ತಿದೆ. ಆರ್ಥಿಕ ಇಲಾಖೆ ನವೆಂಬರ್ ವರೆಗೆ ನೀಡಿದ ಅಂಕಿ - ಅಂಶದ ಪ್ರಕಾರ 1,39,065.47 ಕೋಟಿ ರೂ. ರಾಜಸ್ವ ಸ್ವೀಕೃತಿ ಮಾಡಲಾಗಿದೆ. ಅಂದರೆ ನವೆಂಬರ್ ವರೆಗೆ ಒಟ್ಟು ಶೇ 74ರಷ್ಟು ರಾಜಸ್ವ ಸ್ವೀಕಾರ ಮಾಡಲಾಗಿದೆ. ನವೆಂಬರ್ ವರೆಗೆ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಮೂಲಕ 20,098.87 ಕೋಟಿ ರೂ. ಬಂದಿದೆ. ಇನ್ನು ಕೇಂದ್ರದ ಸಹಾಯಾನುದಾನ ಮೂಲಕ 18,359.35 ಕೋಟಿ ರೂ. ರಾಜ್ಯಕ್ಕೆ ಹರಿದು ಬಂದಿದೆ.

ನವೆಂಬರ್ ವರೆಗೆ ರಾಜಸ್ವ ವೆಚ್ಚ ಆಗಿರುವುದು 1,16,829 ಕೋಟಿ ರೂ. ಬಂಡವಾಳ ವೆಚ್ಚ ಆಗಿರುವುದು 23,924 ಕೋಟಿ ರೂ. ನವೆಂಬರ್ ವರೆಗೆ ರಾಜ್ಯದ ವಿತ್ತೀಯ ಕೊರತೆ (ರಾಜಸ್ವ ಜಮೆ-ರಾಜಸ್ವ ವೆಚ್ಚ) 1,552.52 ಕೋಟಿ ರೂ. ಇದೆ. ಈವರೆಗಿನ ರಾಜಸ್ವ ಕೊರತೆ 22,235.99 ಕೋಟಿ ರೂ. ಇದೆ. ಈವರೆಗೆ ಆರ್​ಬಿಐ ಮೂಲಕ ಸುಮಾರು 32,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿದೆ. ಒಟ್ಟು ರಾಜಸ್ಚ ಸ್ವೀಕೃತಿ ಪೈಕಿ ಶೇ 14.3ರಷ್ಟು ಸಾಲದ ಬಡ್ಡಿ ಮರುಪಾವತಿ ಮಾಡಲಾಗಿದೆ. ಅಂದರೆ ಒಟ್ಟು 14,178 ಕೋಟಿ ರೂ. ಸಾಲದ ಅಸಲು ಪಾವತಿ ಮಾಡಿದ್ದರೆ, 29,397 ಕೋಟಿ ರೂ. ಬಡ್ಡಿ ಮರುಪಾವತಿ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ನೀಡಿದೆ.

2023-24ರಲ್ಲಿ ಬದ್ಧ ವೆಚ್ಚದಲ್ಲಿ ಗಣನೀಯ ಏರಿಕೆ:2023-24ರಲ್ಲಿ ಬದ್ಧ ವೆಚ್ಚದಲ್ಲಿ ಗಣನೀಯ ಏರಿಕೆಯಾಗಲಿದೆ. ಏಳನೇ ವೇತನ ಆಯೋಗ ಜಾರಿಯಾಗುವ ಸಾಧ್ಯತೆ ಇದ್ದು, 2023-24ರಲ್ಲಿ ಸರ್ಕಾರಿ ನೌಕರರ ವೇತನ ವೆಚ್ಚವೇ ಅಂದಾಜು ಬರೋಬ್ಬರಿ 56,942 ಕೋಟಿ ರೂ. ಹೋಗಲಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ.

2023-24ರಲ್ಲಿ ಬಡ್ಡಿ ಮರುಪಾವತಿ ಹೊರೆ 35,091 ಕೋಟಿ ರೂ. ಆಗಲಿದೆ. ಅದೇ ರೀತಿ ಸಾಲದ ಅಸಲು ಪಾವತಿ ಅಂದಾಜು 30,000 ಕೋಟಿ ರೂ. ಆಗಲಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ. 2023-24 ಸಾಲಿನಲ್ಲಿ ರಾಜಸ್ವ ವೆಚ್ಚವೇ ಅಂದಾಜು 2,39,587 ಕೋಟಿ ರೂ. ಆಗಲಿದೆ. ಅದೇ ರೀತಿ ರಾಜಸ್ವ ಸ್ವೀಕೃತಿ ಅಂದಾಜು 1,99,019 ಕೋಟಿ ರೂ.‌ ಇರಲಿದೆ ಎಂದು ಹೇಳಲಾಗಿದೆ.

ಆದರೆ, ಹೆಚ್ಚುವರಿ ಬಜೆಟ್ ಅಂದರೆ ಅಲ್ಪ ಹೆಚ್ಚುವರಿ ಆದಾಯದ ಬಜೆಟ್ ಮಂಡನೆ ಮಾಡಲು ಯತ್ನಿಸಲಾಗುವುದು ಎಂದು ಸಿಎಂ ಬೊಮ್ಮಾಯಿ‌ ಈಗಾಗಲೇ ತಿಳಿಸಿದ್ದಾರೆ. 2023-24ರಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಶೇ 8-10 ರಷ್ಟು ಬೆಳವಣಿಗೆ ಹಾಗೂ ಮಾರಾಟ ತೆರಿಗೆಯಲ್ಲಿ 8ರಷ್ಟು ಬೆಳವಣಿಗೆಯಾಗುವ ಅಂದಾಜು ಮಾಡಲಾಗಿದೆ. 2023-24ರಲ್ಲಿ ಜಿಎಸ್​ಟಿ ಪರಿಹಾರವಾಗಿ 4,000 ಕೋಟಿ ರೂ. ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ:ಸ್ಯಾಂಟ್ರೊ ರವಿ ಜೊತೆ ನಾನು ಚಾಟಿಂಗ್ ಮಾಡಿದ್ದೇನೆ ಎಂಬುದು ಸುಳ್ಳು: ರಾಜಕಾರಣಿಗಳ ಜತೆಗಿನ ನಂಟು ಅಲ್ಲಗಳೆದ ಸಿಎಂ

ABOUT THE AUTHOR

...view details