ಬೆಂಗಳೂರು:ಬೊಮ್ಮನಹಳ್ಳಿ, ಮಹದೇವಪುರ, ಕೆ.ಆರ್.ಪುರನಂತಹ ಎತ್ತರದ ಪ್ರದೇಶದಲ್ಲಿ ಅತಿ ಹೆಚ್ಚು ಕೆರೆಗಳಿದ್ದು, ಒಂದಕ್ಕೊಂದು ಹೊಂದಿಕೊಂಡಿರುವ ಕೆರೆಗಳಿಗೆ ಸ್ಲೂಯೀಸ್ ಗೇಟ್ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಒತ್ತುವರಿ ತೆರವುಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ತಗ್ಗು ಪ್ರದೇಶದಲ್ಲಿ ನೀರು ಹೋಗಲು ದಾರಿ ಇಲ್ಲ. ಇಂತಹ ಜಾಗದಲ್ಲಿ ಮನೆ ಕಟ್ಟಲು ಆದೇಶ ನೀಡಿದವರು ಯಾರು ಎಂಬುದರ ಬಗ್ಗೆ ಸೂಕ್ತ ತನಿಖೆ ಮಾಡಿಸಲಾಗುವುದು ಎಂದರು.
ಸ್ಲೂಯಿಸ್ ಗೇಟ್ ಹಾಕಿದ ಮೇಲೆ ಬೇಸಿಗೆ ಕಾಲದಲ್ಲಿ ಎಲ್ಲಾ ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕು. ವಲಯವಾರು ಮಳೆ ನೀರು ಚರಂಡಿಗಳ ನಿರ್ವಹಣೆಗೆ ಕೈಪಿಡಿ ಮಾಡಬೇಕು. ಈಗಾಗಲೇ ಈ ಉದ್ದೇಶಕ್ಕಾಗಿ 1500 ಕೋಟಿಗೆ ಟೆಂಡರ್ ಆಗಿದೆ. ಅವಶ್ಯಕತೆ ಇದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಇಲಾಖೆಗಳ ಮಧ್ಯೆ ಸಮನ್ವಯ ಬೇಕು:ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ ಕೆಲವೆಡೆ ಬಿಡಿಎ ಹಾಗೂ ಬೆಸ್ಕಾಂಗಳ ಮಧ್ಯೆ ಸಮನ್ವಯದ ಅವಶ್ಯಕತೆ ಇದೆ. ಬೇಜವಾಬ್ದಾರಿಯಿಂದ ನಾಲ್ಕು ಸಂಸ್ಥೆಗಳು ನಡೆದುಕೊಳ್ಳಬೇಕು. ಬೆಂಗಳೂರು ಜಲ ಮಂಡಳಿ ಒಳಚರಂಡಿ ಘಟಕಗಳನ್ನು ಸುಸ್ಥಿತಿಯಲ್ಲಿ ಇರುವಂತೆ ಮಾಡಲು ಕಾಲಮಿತಿ ಹಾಕಿಕೊಳ್ಳಬೇಕು. 2015- 16 ರಲ್ಲಿ ಸ್ಥಾಪಿಸಿದ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿಲ್ಲ. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ :ಬೆಂಗಳೂರು ನೆರೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ಸಿಎಂ.. ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಖಡಕ್ ಸೂಚನೆ