ಬೆಂಗಳೂರು:ಎರಡು ತಿಂಗಳಿನಲ್ಲಿ ನಗರದ ರಸ್ತೆ ಗುಂಡಿಗಳ ಮುಚ್ಚುವ ಕಾರ್ಯ ಪೂರ್ಣಗೊಳಿಸಬೇಕು ಹಾಗು ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಯಿತು. ರಸ್ತೆಗುಂಡಿ ಮುಚ್ಚುವ ಕಾರ್ಯ ಬೇಗ ಆಗಬೇಕು, ಮಾರ್ಚ್ ಒಳಗೆ ಕಾರ್ಯ ಪೂರ್ಣಗೊಂಡಿರಬೇಕು. ರಸ್ತೆ ದುರಸ್ತಿ ಕಾಮಗಾರಿ ತುಂಬಾ ಕಳಪೆಯಾಗಿವೆ ಎಂಬ ಆರೋಪಗಳು ಹೆಚ್ಚಾಗುತ್ತಿದೆ. ಶೇ. 40ರಷ್ಟು ಕಮಿಷನ್ ಪಡೆಯಲಾಗುತ್ತದೆ ಎಂಬ ಅಪವಾದ ಕೇಳಿಬರುತ್ತಿದೆ. ಇದೆಲ್ಲಾ ಆಗಬಾರದು, ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಿಸಿ ಎಂದು ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಒತ್ತುವರಿ ತೆರವು ಮಾಡಿ:
ಸಭೆಯಲ್ಲಿ ಮಳೆಹಾನಿಯ ಅನಾಹುತಗಳ ಬಗ್ಗೆ ಪ್ರಸ್ತಾಪವಾಯಿತು. ರಾಜಕಾಲುವೆ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಬೆಂಗಳೂರು ನಗರದಲ್ಲಿ ಒತ್ತುವರಿದಾರರ ಹಾವಳಿ ಹೆಚ್ಚಾಗಿದೆ ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮಳೆ ಬಂದರೆ ಸಾಕಷ್ಟು ಸಮಸ್ಯೆಗಳಾಗುತ್ತವೆ, ನೀರು ಸರಾಗವಾಗಿ ಹರಿಯಲು ಒತ್ತುವರಿ ತೆರವು ಮಾಡಬೇಕು, ರಾಜಕಾಲುವೆ ಒತ್ತುವರಿ ತೆರವು ಬಗ್ಗೆ ಗಮನ ಹರಿಸಬೇಕು. ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ ನಡೆಯಬೇಕು ರಸ್ತೆಗುಂಡಿ ಮುಚ್ಚುವ ಕಾರ್ಯ ಬೇಗ ಆಗಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.