ಬೆಂಗಳೂರು: ರಾಜ್ಯದ ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ದೇವಸ್ಥಾನ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದರ ಜೊತೆಗೆ ಸ್ಮಾರಕ ಪ್ರವಾಸೋದ್ಯಮಕ್ಕೂ ಅವಕಾಶ ಇರುವುದರಿಂದ ಇದಕ್ಕೆ ಉತ್ತೇಜನ ನೀಡಲು ಎರಡನ್ನೂ ಸಂಯೋಜಿಸಿ ಟೂರಿಸಂ ಸಕ್ರ್ಯೂಟ್ ನಿರ್ಮಿಸುವಂತೆ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ ಹಾಗೂ ದೈವ ಸಂಕಲ್ಪ ಯೋಜನೆಗಳನ್ನು (Integrated Temple Management System- ಐಟಿಎಂಎಸ್) ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸಿಎಂ ತಿಳಿಸಿದರು.
ಐಟಿಎಂಎಸ್ ಅನ್ನು ಜಾರಿಗೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ದೇವಸ್ಥಾನಗಳ ನಿರ್ವಹಣೆ ಬಹಳ ಮುಖ್ಯ. ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಮುಂತಾದವುಗಳನ್ನು ದಾಖಲಿಸುವ ಪ್ರಯತ್ನವಾಗಬೇಕು. ದೇವಸ್ಥಾನಗಳ ಆಸ್ತಿಗಳ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುವ ಅಗತ್ಯವಿದೆ ಎಂದರು.