ಬೆಂಗಳೂರು:ಬೆಂಗಳೂರು ಯೋಜನಾ ಬದ್ಧವಾಗಿ ಬೆಳೆಯುತ್ತಿಲ್ಲ, ಮುಂದಿನ ಐವತ್ತು ವರ್ಷಗಳ ಯೋಜನೆಯನ್ನು ಬೆಂಗಳೂರಿಗೆ ರೂಪಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಉದ್ಯಾನವನ ಹಾಗೂ ಸ್ಕೇಟಿಂಗ್ ಟ್ರ್ಯಾಕ್ ಉದ್ಘಾಟನೆ, 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭೂಮಿಪೂಜೆ, ಅಂಬೇಡ್ಕರ್ ಕ್ರೀಡಾಂಗಣದ ನವೀಕರಣ ಕಾಮಗಾರಿ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಕಟ್ಟಡದ ಭೂಮಿಪೂಜೆ, ನರ್ಸರಿ ಬ್ಲಾಕ್ ಮತ್ತು ಪ್ರಾಥಮಿಕ ಶಾಲೆ ಕಟ್ಟಡದ ಭೂಮಿಪೂಜೆ, ವಿವಿಧೋದ್ದೇಶ ಕಟ್ಟಡದ ಭೂಮಿಪೂಜೆ, ಆರ್.ಕೆ.ಉರ್ದು ಸ್ಕೂಲ್‌ನ ಭೂಮಿ ಪೂಜೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಭೂಮಿಪೂಜೆ ಹಾಗು ಒಳಾಂಗಣ ಕ್ರೀಡಾಸೌಧ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪುತ್ಥಳಿಯನ್ನು ಸಿಎಂ ಉದ್ಘಾಟಿಸಿದರು.
ನಾಗರೀಕ ಸೇವೆಗಳನ್ನು ಅಪ್ ಗ್ರೇಡ್ ಮಾಡಬೇಕಿದೆ:
ನಂತರ ಮಾತನಾಡಿದ ಸಿಎಂ, ಬೆಂಗಳೂರಲ್ಲಿ ಯಾರಿಗೆ ಮನೆ ಇದೆಯೋ ಅವರಲ್ಲಿ ಹಲವರಿಗೆ ದಾಖಲೆ ಇಲ್ಲ, R ಸಮಸ್ಯೆ ಬಗೆಹರಿಸುತ್ತೇವೆ. ಪ್ರತೀ ವಾರ್ಡ್ಗೆ ತುರ್ತುಚಿಕಿತ್ಸೆ ವ್ಯವಸ್ಥೆ ಸಲುವಾಗಿ ಆಸ್ಪತ್ರೆ ತೆರೆಯಬೇಕಿದೆ. ಬೆಂಗಳೂರಿನಲ್ಲಿ ನಾಗರೀಕರ ಸೇವೆಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಬೇಕು. ಇದಕ್ಕೆ ಈಗಿರುವ ನಾಗರೀಕ ಸೇವೆಗಳನ್ನು ಅಪ್ ಗ್ರೇಡ್ ಮಾಡಬೇಕಿದೆ ಎಂದರು.
ವಯಸ್ಸು 70 ಪ್ಲಸ್, ಕೆಲಸ 20 ಪ್ಲಸ್:
ವಿ. ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ, ಅವ್ರನ್ನg ಕೇಳಿದೆ ವಯಸ್ಸು ಎಷ್ಟು ಅಂತಾ ಅವರಿಗೆ 70 ಪ್ಲಸ್ ಅಂದರು. ಆದರೆ ಕೆಲಸ 20 ಪ್ಲಸ್. ನನಗೆ ಸೋಮಣ್ಣನ ನೋಡಿದ್ರೆ ಖುಷಿಯೂ ಇದೆ, ಹೊಟ್ಟೆಕಿಚ್ಚೂ ಇದೆ. ಸೋಮಣ್ಣ ಪಾದರಸದ ಹಾಗೆ. ನಾವು ಬ್ಯುಸಿಯಲ್ಲಿರುವಾಗ್ಲೇ ಬಂದು ನೂರಿನ್ನೂರು ಕೋಟಿ ರೂ.ಗೆ ಮಂಜೂರು ತಗೊಂಡು ಹೋಗಿರ್ತಾರೆ. ಈ ಬೆಂಗಳೂರು ಸಚಿವರು ಈಗ ಇದೇ ಥರ ಕಲಿತುಕೊಂಡಿದ್ದಾರೆ, ಇವ್ರೆಲ್ಲಾ ಕೆಲಸ ಮಾಡೋದ್ರಿಂದ ಬೆಂಗಳೂರು ಸಚಿವನಾಗಿ ನನ್ನ ಕೆಲಸ ಕಡಿಮೆ ಆಗಿದೆ ಎಂದರು.
ಬೆಂಗಳೂರು ಸಚಿವರ ಕಾರ್ಯಕ್ಕೆ ಸಿಎಂ ಮೆಚ್ಚುಗೆ:
ನಮ್ಮ ಬೆಂಗಳೂರಿನ ಸಚಿವರು ಶಕ್ತಿ ಮೀರಿ ಕೋವಿಡ್ ವೇಳೆ ಕೆಲಸ ಮಾಡಿದ್ದಾರೆ. ಪೈಪೋಟಿಯಿಂದ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ನಮ್ಮ ಸಚಿವರ ಕಾರ್ಯದಿಂದ ಬೆಂಗಳೂರು ಅಂತಾರಾಷ್ಟ್ರೀಯವಾಗಿ ಮನ್ನಣೆ ಗಳಿಸುತ್ತಿದೆ. ಆದರೂ ಬೆಂಗಳೂರು ಯೋಜನಾಬದ್ಧವಾಗಿ ಬೆಳೆಯುತ್ತಿಲ್ಲ, ಮುಂದಿನ ಐವತ್ತು ವರ್ಷಗಳ ಯೋಜನೆ ಬೆಂಗಳೂರಿಗೆ ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಬಸವರಾಜ್ ಬೊಮ್ಮಾಯಿ ಹಾಸ್ಯ ಭಾಷಣ:
ಬೆಂಗಳೂರು ಸಚಿವರ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಿಎಂ, ಎಲ್ಲರನ್ನೂ ಸ್ವಾಗತ ಮಾಡುವಾಗ ಮುನಿರತ್ನ ಇದಿಯೇನಪ್ಪಾ ಅಂತಾ ಹುಡುಕಿದರು. ಈ ಸಂದರ್ಭದಲ್ಲಿ ಯಾವುದೋ ಆಲೋಚನೆಯಲ್ಲಿ ಕುಳಿತಿದ್ದ ಮುನಿರತ್ನರನ್ನು ಪಕ್ಕದಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದರು. ಆಗ ಗಲಿಬಿಲಿಗೊಂಡು ಸಿಎಂ ಕಡೆ ತಿರುಗಿದರು. ಮುನಿರತ್ನರನ್ನು ನೋಡಿ ಏನಪ್ಪ ಇಲ್ಲೇ ಇದ್ದೀಯಾ ಎಂದು ಭಾಷಣ ಮುಂದುವರಿಸಿದರು, ಈ ಬೆಂಗಳೂರಿಗರು ಯಾವಾಗ ಸೇರಿಕೊಳ್ಳುತ್ತಾರೋ ಯಾವಾಗ ಬಿಟ್ಟು ಹೋಗ್ತಾರೋ, ಗೊತ್ತಾಗಲ್ಲ ಎನ್ನುತ್ತಿದ್ದಂತೆ ಸಭಿಕರು ನಗೆಗಡಲಿನಲ್ಲಿ ತೇಲಿದರು.