ಬೆಂಗಳೂರು: ರಾಜ್ಯದ 15 -18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ವಿತರಣಾ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಇಂದು ಬಿಬಿಎಂಪಿ ಮಹಿಳೆಯರ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಮೂಡಲಪಾಳ್ಯದಲ್ಲಿ ಮಕ್ಕಳ ಲಸಿಕಾ ಅಭಿಯಾನವನ್ನು ಸಿಎಂ ಉದ್ಘಾಟಿಸಿ, ಸಾಂಕೇತಿಕವಾಗಿ ಆರು ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು. 28 ದಿನಗಳ ಬಳಿಕ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ.
ರಾಜ್ಯದಲ್ಲಿ 43 ಲಕ್ಷ, ಬೆಂಗಳೂರಲ್ಲಿ ಒಟ್ಟು 4 ಲಕ್ಷ 41 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇಂದು ಒಂದೇ ದಿನ 61 ಸಾವಿರ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ನಗರದ 255 ಶಾಲಾ - ಕಾಲೇಜಿನಲ್ಲಿ ಲಸಿಕೆ ನೀಡಲಾಗುತ್ತಿದೆ.
ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಲಸಿಕಾ ಕಾರ್ಯಕ್ರಮ ಹೊಸವರ್ಷದಲ್ಲಿ ಆಗ್ತಿದೆ. ಎಲ್ಲರೂ ಸುರಕ್ಷಿತ ಆರೋಗ್ಯ ಭಾಗ್ಯ ನಿಮ್ಮದಾಗಲಿ. ಕೊರೊನಾ ಯಾರೂ ನಿರೀಕ್ಷಿಸಿರಲಿಲ್ಲ. ದೇಶ ಕೊರೊನಾ ಎದುರಿಸಿದ ರೀತಿ ಹಾಗೂ ಲಸಿಕೆ ಅಭಿಯಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮೂರನೆ ಅಲೆ ಅಕ್ಕಪಕ್ಕದ ರಾಜ್ಯದಲ್ಲಿ ಬಹಳ ಹೆಚ್ಚಿದೆ. ರಾಜ್ಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಗಡಿಯಲ್ಲಿ ಭದ್ರತೆ, ಆರ್ಟಿ-ಪಿಸಿಆರ್ ಪರೀಕ್ಷೆ, ಕೋವಿಡ್ ಪರೀಕ್ಷೆ, ಲಸಿಕೆ ನೀಡುವಿಕೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗಿದೆ. ಮಕ್ಕಳ ಆರೋಗ್ಯ ಬಹಳ ಮುಖ್ಯ. ಇಂದಿನಿಂದ ಮೊದಲ ಲಸಿಕೆ ಡೋಸ್ ನೀಡಲಾಗುತ್ತದೆ ಎಂದರು.