ಬೆಂಗಳೂರು:ಕನಕಪುರ ವಿಧಾನಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ಚಿತ್ರಣದ ಕುರಿತು ಅಭ್ಯರ್ಥಿ ಆರ್.ಅಶೋಕ್ ಅವರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದು, ಪಕ್ಷಕ್ಕೆ ನೆಲೆ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚಿಸಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಕನಕಪುರ ಬಿಜೆಪಿ ಅಭ್ಯರ್ಥಿಯಾಗಿರುವ ಕಂದಾಯ ಸಚಿವ ಆರ್.ಅಶೋಕ್ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಸಭೆ ನಡೆಸಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಸಮಾರಂಭದ ನಂತರ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಕನಕಪುರ ಅಖಾಡದ ಚಿತ್ರಣ ಪಡೆದುಕೊಂಡರು. ಕನಕಪುರದಲ್ಲಿ ವರಿಷ್ಠರ ಪ್ರಚಾರ ಕಾರ್ಯದ ಕುರಿತು ಮಾತುಕತೆ ನಡೆಸಲಾಯಿತು. ಇನ್ನುಳಿದ ದಿನಗಳಲ್ಲಿ ಕ್ಷೇತ್ರದಲ್ಲಿ ಯಾವ ರೀತಿ ಪ್ರಚಾರ ಕಾರ್ಯ ನಡೆಸಬೇಕು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ತಂತ್ರದ ನಡುವೆ ಕ್ಷೇತ್ರ ಗೆಲ್ಲಲು ಏನೆಲ್ಲ ಪ್ರತಿ ತಂತ್ರ ರೂಪಿಸಬೇಕೆಂದು ಮಾತುಕತೆ ನಡೆಸಲಾಯಿತು.
ಕನಕಪುರ ಕ್ಷೇತ್ರದಲ್ಲಿ ಮೇ 4 ರಂದು ಅಮಿತ್ ಶಾ ಪ್ರಚಾರ ಕಾರ್ಯ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಅಮಿತ್ ಶಾ ಪ್ರಚಾರ ಕಾರ್ಯದ ಹಿನ್ನೆಲೆಯಲ್ಲಿ ನಾಳೆ ಕನಕಪುರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರವಾಸ ಕೈಗೊಳ್ಳುತ್ತಿದ್ದು ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರ ಜತೆ ತಂತ್ರಗಾರಿಕೆ ಕುರಿತು ಸಭೆ ನಡೆಸಲಿದ್ದಾರೆ. ಈ ವಿಚಾರವಾಗಿಯೂ ಸಿಎಂ ಚರ್ಚಿಸಿದ್ದಾರೆ.