ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸ ರೇಸ್ ವ್ಯೂವ್ ಕಾಟೇಜ್ನಲ್ಲಿ ಇಂದು ಸಡಗರದ ವಾತಾವರಣ ನಿರ್ಮಾಣವಾಗಿತ್ತು. ಮೊನ್ನೆಯಷ್ಟೇ ಸೇವೆ ಖಾಯಂಗೊಂಡು ಸಿಹಿ ಸುದ್ದಿ ಪಡೆದಿದ್ದ ಪೌರ ಕಾರ್ಮಿಕ ಮಹಿಳೆಯರಿಗೆ ಇಂದು ಮುಖ್ಯಮಂತ್ರಿಯವರೊಂದಿಗೆ ಬೆಳಗ್ಗಿನ ಉಪಾಹಾರ ಸವಿಯುವ ಅವಕಾಶ ಒದಗಿತ್ತು. ಹಾಗಾಗಿ ಇದು ಅವರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿತ್ತು.
ಸಿಎಂ ಬೊಮ್ಮಾಯಿ ಆಗಮಿಸುತ್ತಿದ್ದಂತೆ ಅವರನ್ನು ಸುತ್ತುವರಿದು, ಶಾಲು, ಹಾರ, ಫಲ ತಾಂಬೂಲ ಅರ್ಪಿಸಿದವರು. ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು ನಿಮ್ಮ ಆರೋಗ್ಯ, ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಲಿದೆ ಎಂದು ಭರವಸೆ ನೀಡಿದರು. ಜೊತೆಗೆ ನಿಮ್ಮ ಮನೆಯ ಗಂಡು ಮಕ್ಕಳ ಬಗ್ಗೆ ನಿಗಾ ವಹಿಸಿ ಎಂದು ಕಿವಿಮಾತು ಹೇಳಿದರು.
ನಂತರ ಪೌರ ಕಾರ್ಮಿಕರಿಗೆ ಸ್ವತಃ ತಿಂಡಿ ಬಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಪಕ್ಕ ಕುಳಿತ ಭಾರತಿ ಅವರೊಂದಿಗೆ ಮಾತನಾಡಿದರು. ಅವರ ವೇತನ ಸರಿಯಾಗಿ ಆಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಸೂಕ್ತ ಸೌಲಭ್ಯಗಳು ದೊರೆಯುತ್ತಿವೆಯೇ. ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು.