ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿಗೆ ಬದ್ಧ ವೆಚ್ಚದ ಟೆನ್ಷನ್: ಮೂಲ ಸೌಕರ್ಯ ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಭಾರೀ ಕತ್ತರಿ

ಹೊರೆಯಾಗದ ಬಜೆಟ್ ಮಂಡನೆಗೆ ಪೂರ್ವಸಿದ್ಧತೆ ಆರಂಭ- ಸಿಎಂ ಬಜೆಟ್​ ಮಂಡನೆಗೆ ಬದ್ಧ ವೆಚ್ಚದ ಹೊರೆ- ರಾಜಸ್ವ ವೆಚ್ಚ ಗಣನೀಯ ಏರಿಕೆ

ಸಿಎಂ ಬೊಮ್ಮಾಯಿಗೆ ಬದ್ಧ ವೆಚ್ಚದ ಟೆನ್ಷನ್: ಮೂಲ ಸೌಕರ್ಯ ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಭಾರೀ ಕತ್ತರಿ!
cm-bommai-facing-committed-cost-problem

By

Published : Jan 31, 2023, 5:12 PM IST

ಬೆಂಗಳೂರು: ಸಿಎಂ ಬೊಮ್ಮಾಯಿ 2023-24 ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯದ್ದು ಚುನಾವಣೆ ಬಜೆಟ್ ಆಗಲಿದ್ದು, ಜನಪರ ಆಯವ್ಯಯ ಮಂಡನೆ ಮಾಡಲಿದ್ದೇನೆ ಎಂದು ಸಿಎಂ ಬೊಮ್ಮಾಯಿ ಈಗಾಗಲೇ ತಿಳಿಸಿದ್ದಾರೆ. ಆದರೆ ಈ ಬಾರಿಯ ಬಜೆಟ್ ನಲ್ಲಿ ಸಿಎಂಗೆ ದೊಡ್ಡ ತಲೆನೋವಾಗಿರುವುದು ಬದ್ಧ ವೆಚ್ಚ. ಬದ್ಧ ವೆಚ್ಚ ಉಲ್ಬಣಗೊಳ್ಳುವುದರಿಂದ ಇತ್ತ ಆಸ್ತಿಗಳನ್ನು ಸೃಜಿಸುವ ಬಂಡವಾಳ ವೆಚ್ಚ ಗಣನೀಯ ಕುಂಠಿತವಾಗಲಿದೆ.

ಸಿಎಂ ಬೊಮ್ಮಾಯಿ ಫೆ.17ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇರುವ ಕರ್ನಾಟಕಕ್ಕೆ ಈ ಬಾರಿಯ ಬಜೆಟ್ ಚುನಾವಣೆ ಕೇಂದ್ರೀಕೃತವಾಗಲಿದೆ. ಜನಪ್ರಿಯ ಘೋಷಣೆ, ಹೊರೆಯಾಗದ ಬಜೆಟ್ ಮಂಡನೆಗೆ ಪೂರ್ವಸಿದ್ಧತೆ ಆರಂಭಿಸಿದ್ದಾರೆ. ಕೋವಿಡ್-ಲಾಕ್ ಡೌನ್ ನಿಂದ ರಾಜ್ಯದ ಆದಾಯ ಬಹುತೇಕ ಚೇತರಿಕೆ ಕಂಡಿದೆ. ಆದರೂ ಕೋವಿಡ್ ಭೀತಿ ಮನದಲ್ಲಿರಿಸಿಕೊಂಡು ಎಚ್ಚರಿಕೆಯಿಂದ ಬಜೆಟ್ ರೂಪಿಸುವ ಅನಿವಾರ್ಯತೆ ಇದೆ. ಹೊಸ ಯೋಜನೆ ಘೋಷಿಸುವ ಸಾಧ್ಯತೆ ಇದ್ದು, ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಕಷ್ಟ ಸಾಧ್ಯವಾಗಿದೆ. ಹಳೆಯ ಕಾರ್ಯಕ್ರಮಗಳನ್ನು ಕೈಬಿಡದೆ ಹೊಸ ಕಾರ್ಯಕ್ರಮಗಳನ್ನು ಕೈಗೊಂಡಾಗ ಯೋಜನೆಗಳು ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಚಾಲ್ತಿಯಲ್ಲಿರುವ ಯೋಜನೆಗಳ ಸಂಖ್ಯೆ ಹಾಗೂ ಅದಕ್ಕಾಗುವ ಅನುದಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡುವುದು ಕಷ್ಟಕರವಾಗಲಿದೆ ಎಂದು ಈಗಾಗಲೇ ಆರ್ಥಿಕ ಇಲಾಖೆ ತಿಳಿಸಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿ‌ಗೆ ಜನಪ್ರಿಯ ಬಜೆಟ್ ಮಂಡಿಸಲು ಅಡ್ಡಿಯಾಗುತ್ತಿರುವುದು ಬದ್ಧ ವೆಚ್ಚದ ಹೊರೆ.

ತಲೆನೋವಾದ ಬದ್ಧ ವೆಚ್ಚದ ಹೊರೆ:ಈ ಬಾರಿ ಆದಾಯ ಬಜೆಟ್ ನಿರೀಕ್ಷೆ ಮೀರಿ ಸಂಗ್ರಹವಾಗುವತ್ತ ಸಾಗಿದೆ. ಹೀಗಾಗಿನೇ 2023-24 ಸಾಲಿನಲ್ಲಿ ಹೆಚ್ಚುವರಿ ಆದಾಯದ ಬಜೆಟ್ ಮಂಡನೆ‌ ಆಗಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ. ಅಂದರೆ ಒಟ್ಟು ವೆಚ್ಚಗಿಂತ ಈ ಬಾರಿ ರಾಜಸ್ವ ಸಂಗ್ರಹ ಹೆಚ್ಚಿರಲಿದೆ. ಆದಾಗ್ಯೂ ವೇತನ, ಪಿಂಚಣಿ, ಸಹಾಯಧನಗಳನ್ನೊಳಗೊಂಡ ಬದ್ಧ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಇದು ಸಿಎಂ ಬೊಮ್ಮಾಯಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೆಚ್ಚ ಕಡಿತದ ಕ್ರಮಗಳು ಪರಿಗಣಿಸಲ್ಪಡುವಷ್ಟು ಫಲಿತಾಂಶ ನೀಡಿಲ್ಲ. ಆರ್ಥಿಕ ಇಲಾಖೆಯ ನೀಡಿದ ಮಾಹಿತಿ ಪ್ರಕಾರ 2022-23ರಲ್ಲಿ ಬದ್ಧ ವೆಚ್ಚ ಸೇರಿದಂತೆ ಒಟ್ಟು ರಾಜಸ್ವ ವೆಚ್ಚ 2,04,587 ಕೋಟಿ ರೂ. ಅಂದಾಜಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಈ ರಾಜಸ್ವ ವೆಚ್ಚ ಸುಮಾರು 1,30,000 ಕೋಟಿ ರೂ. ಗಡಿ ದಾಟಿದೆ.

ಆದಾಯ ಸಂಗ್ರಹದ ಮೂಲಗಳು ಅದೇ ಇದ್ದು, ಸೀಮಿತ ಆದಾಯ ಸಂಗ್ರಹವಾಗುತ್ತಿದೆ. ಆದರೆ ರಾಜಸ್ವ ವೆಚ್ಚ ಗಣನೀಯ ಏರಿಕೆಯಾಗುತ್ತಿರುವುದು ಸಿಎಂ ಬೊಮ್ಮಾಯಿ ಲೆಕ್ಕಾಚಾರ ಉಲ್ಟಾ ಮಾಡುತ್ತಿದೆ. ಈ ಬಾರಿ ಏಳನೇ ವೇತನ ಆಯೋಗದ ಪರಿಷ್ಕೃತ ವೇತನ ಜಾರಿಯಾಗುವ ಸಾಧ್ಯತೆ ಇದ್ದು, ಬದ್ಧ ವೆಚ್ಚ ಮತ್ತಷ್ಟು ಗಗನಕ್ಕೇರಲಿದೆ ಎಂದು ಆರ್ಥಿಕ ಇಲಾಖೆ ಆತಂಕ ವ್ಯಕ್ತಪಡಿಸಿದೆ. 2023-24ರಲ್ಲಿ ರಾಜಸ್ವ ವೆಚ್ಚ 2,39,587 ಕೋಟಿ ರೂ. ಏರಿಕೆಯಾಗಲಿದೆ. ಆ ಮೂಲಕ ಕಳೆದ ಬಾರಿಗಿಂತ 2023-24 ಸಾಲಿನಲ್ಲಿ ಸುಮಾರು 35,000 ಕೋಟಿ ರೂ.ರಷ್ಟು ರಾಜಸ್ವ ವೆಚ್ಚ ಗಣನೀಯ ಜಿಗಿತವಾಗಲಿದೆ. ಇದು ಸಿಎಂ ಬೊಮ್ಮಾಯಿ‌ ಬಜೆಟ್ ಲೆಕ್ಕಾಚಾರಕ್ಕೆ ಅಡ್ಡಿಯಾಗುತ್ತಿದೆ. ಪ್ರತಿ ವರ್ಷ ಸರಾಸರಿ 8,000-10,000 ಕೋಟಿ ರೂ. ರಾಜಸ್ವ ವೆಚ್ಚ ಹೆಚ್ಚಳವಾದರೆ, 2023-24 ಸಾಲಿನಲ್ಲಿ 35,000 ಕೋಟಿ ರೂ. ಅಧಿಕ ರಾಜಸ್ವ ವೆಚ್ಚ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಗಣನೀಯ ಇಳಿಕೆಯಾಗಲಿದೆ ಬಂಡವಾಳ ವೆಚ್ಚ: 2023-24 ಸಾಲಿನಲ್ಲಿ ಬಂಡವಾಳ ವೆಚ್ಚದಲ್ಲಿ ಗಣನೀಯ ಇಳಿಕೆಯಾಗಲಿದೆ. ಬಂಡವಾಳ ವೆಚ್ಚ ಕಟ್ಟಡ, ರಸ್ತೆ, ಸೇತುವೆ ಮುಂತಾದ ಸ್ಥಿರ ಮೂಲಸೌಕರ್ಯ ಆಸ್ತಿಗಳ ಸೃಷ್ಟಿಸಲು ವ್ಯಯಿಸಲಾಗುತ್ತದೆ. ಅಂದರೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಮಾಡುವ ವೆಚ್ಚಗಳನ್ನು ಬಂಡವಾಳ ವೆಚ್ಚ ಎನ್ನಲಾಗುತ್ತದೆ. ಆದರೆ, 2023-24 ಸಾಲಿನಲ್ಲಿ ಬಂಡವಾಳ ವೆಚ್ಚ ಗಣನೀಯವಾಗಿ ಇಳಿಕೆಯಾಗಲಿದ್ದು, ಸಿಎಂ ಬೊಮ್ಮಾಯಿ‌ಗೆ ದೊಡ್ಡ ತಲೆನೋವಾಗಿದೆ.

ಜನಪ್ರಿಯ ಯೋಜನೆಗಳೊಂದಿಗೆ ಚುನಾವಣಾ ಬಜೆಟ್ ಮಂಡಿಸಲಿರುವ ಬೊಮ್ಮಾಯಿ‌ಗೆ ಅಧಿಕ ಬಂಡವಾಳ ವೆಚ್ಚ ಮಾಡಲು ಸಾಧ್ಯವಾಗದೇ ಇರುವುದು ದೊಡ್ಡ ಸವಾಲಾಗಿದೆ. ರಾಜ್ಯದ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬಂಡವಾಳ ವೆಚ್ಚ ಅತ್ಯಗತ್ಯವಾಗಿದೆ. ಬಂಡವಾಳ ವೆಚ್ಚದ ಮೇಲೆ ಹೆಚ್ಚು ಖರ್ಚು ಮಾಡಿದರೆ ರಾಜ್ಯದ ಮೂಲಸೌಕರ್ಯ ಬಲವರ್ಧನೆಯಾಗುತ್ತದೆ. ಆದರೆ 2023-24ನೇ ಸಾಲಿನಲ್ಲಿ ಬಂಡವಾಳ ವೆಚ್ಚ ಕೇವಲ 20,729 ಕೋಟಿ ರೂ. ಅಂದಾಜಿಸಲಾಗಿದೆ. ಅಂದರೆ 2022-23 ಸಾಲಿನಿಂದ 2023-24 ಸಾಲಿನಲ್ಲಿ ಸುಮಾರು 26,226 ಕೋಟಿ ರೂ.ನಷ್ಟು ಕುಗ್ಗಲಿದೆ.

ಪ್ರತಿ ವರ್ಷ 40,000-46,000 ಕೋಟಿ ರೂ. ಆಸುಪಾಸು ಇರುವ ಬಂಡವಾಳ ವೆಚ್ಚ 2023-24 ಸಾಲಿನಲ್ಲಿ ಬಂಡವಾಳ ವೆಚ್ಚ 20,729 ಕೋಟಿ ರೂ.ಗೆ ಇಳಿಕೆಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಅದರಿಂದ ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿಗಾಗಿನ‌ ಖರ್ಚು ಗಣನೀಯ ಇಳಿಕೆಯಾಗಲಿದೆ. ಹೆಚ್ಚುತ್ತಿರುವ ಬದ್ಧ ವೆಚ್ಚದಿಂದ ಬಂಡವಾಳ ವೆಚ್ಚ ಕಡಿಮೆಯಾಗುತ್ತಿರುವುದು ಸಿಎಂ ಬೊಮ್ಮಾಯಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕುಗ್ಗುತ್ತಿರುವ ಬಂಡವಾಳ ವೆಚ್ಚದ ಅಂಕಿಅಂಶ:2019-20: ಬಜೆಟ್ ಅಂದಾಜು- 42,584 ಕೋಟಿ, ವಾಸ್ತವ ಖರ್ಚು- 39,599 ಕೋಟಿ ರೂ. 2020-21ರಲ್ಲಿ ಬಜೆಟ್ ಅಂದಾಜು - 46,512 ಕೋಟಿ, ವಾಸ್ತವ ಖರ್ಚು- 48,075 ಕೋಟಿ ರೂಪಾಯಿ, 2021-22: ಬಜೆಟ್ ಅಂದಾಜು- 44,237 ಕೋಟಿ, ವಾಸ್ತವ ಖರ್ಚು- 54,909 ಕೋಟಿ, 2022-23 ಬಜೆಟ್ ಅಂದಾಜು- 46,954 ಕೋಟಿ, ವಾಸ್ತವ ಖರ್ಚು (ನವೆಂವರ್ ವರೆಗೆ)- 23,924 ಕೋಟಿ

ಇದನ್ನೂ ಓದಿ: ಬಡವರಿಗೆ ನಿವೇಶನ, ಮನೆ ಕಟ್ಟಲು ಕಾನೂನು ಸರಳೀಕರಣ: ಸಿಎಂ ಬೊಮ್ಮಾಯಿ

ABOUT THE AUTHOR

...view details