ಬೆಂಗಳೂರು: ಹೆಣ್ಣುಮಕ್ಕಳಿಗಾಗಿ ಓಬವ್ವ ಆತ್ಮರಕ್ಷಣಾ ಕಲಾ ಕೌಶಲ್ಯಗಳ ತರಬೇತಿ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಸಿಎಂ ಚಾಲನೆ ನೀಡಿದರು. ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗಾಗಿ ಸರ್ಕಾರದಿಂದ ಮಹತ್ವದ ಕಾರ್ಯಕ್ರಮ ಇದಾಗಿದೆ.
ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತದೆ. ಈಗಾಗಲೇ ರಾಜ್ಯಾದ್ಯಂತ ಪ್ರಾಯೋಗಿಕವಾಗಿ 100 ಹಾಸ್ಟೆಲ್ ಮತ್ತು ವಸತಿಶಾಲೆಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 629 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗುತ್ತದೆ. ಸುಮಾರು 50 ಸಾವಿರ ಹೆಣ್ಣು ಮಕ್ಕಳಿಗೆ ತರಬೇತಿ ಕೊಡಲಾಗುತ್ತದೆ.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ 257 ಹಾಸ್ಟೆಲ್‌ಗಳ ಮಕ್ಕಳಿಗೆ ಕರಾಟೆ ಕಲಿಸಲಾಗುತ್ತದೆ. 30 ಸಾವಿರ ಹೆಣ್ಣು ಮಕ್ಕಳು ಹಾಗೂ 818 ವಸತಿ ಶಾಲೆಗಳ 1.02 ಲಕ್ಷ ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ರಾಜ್ಯದಲ್ಲಿನ ಒಟ್ಟು 1711 ಹಾಸ್ಟೆಲ್ಗಳು ಮತ್ತು ವಸತಿಶಾಲೆಗಳ 1.82 ಲಕ್ಷ ಹೆಣ್ಣು ಮಕ್ಕಳಿಗೆ ಪ್ರಯೋಜನವಾಗಲಿದೆ.
ಹೆಣ್ಣು ಮಕ್ಕಳಿಗಾಗಿ ಓಬವ್ವ ಆತ್ಮರಕ್ಷಣಾ ಕಲಾ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಮಹಿಳಾ ತರಬೇತುದಾರರನ್ನು ನಿಯೋಜಿಸಲಾಗುತ್ತದೆ. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಮಹಿಳಾ ತರಬೇತುದಾರರು ಮಕ್ಕಳನ್ನು ತರಬೇತುಗೊಳಿಸುತ್ತಾರೆ. ಈಗಾಗಲೇ 100 ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ತರಬೇತಿ ಪ್ರಾರಂಭಗೊಂಡಿದ್ದು, ಗೌರವಧನದ ಆಧಾರದಲ್ಲಿ ಸಾವಿರಕ್ಕೂ ಮಿಕ್ಕಿ ತರಬೇತುದಾರರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ನೆಲದಲ್ಲಿ ಹುಟ್ಟಿ ನಮ್ಮ ನೆಲದಲ್ಲಿ ಹೋರಾಟ ತ್ಯಾಗ ಮಾಡಿದವರನ್ನು ಗೌರವಿಸಲು ನಾವು ಹಿಂದೆ ಮುಂದೆ ನೋಡ್ತೇವೆ. ಕನ್ನಡಿಗರ ಇತಿಹಾಸ ಹೋರಾಟ ಮತ್ತೆ ಮರುಕಳಿಸಿ ವೈಭವೀಕರಿಸಿ ಸ್ಪೂರ್ತಿ ತುಂಬುವ ಕಾಲ ಈಗ ಮತ್ತೆ ಬಂದಿದೆ. ಆರು ತಿಂಗಳಲ್ಲಿ ನಮ್ಮ ಸರ್ಕಾರ ಮಾಡಿದ ಸಾಧನೆಗಳು ದಾಖಲೆ ಆಗಿವೆ. ಓಬವ್ವ ಅಂದ್ರೆ ಶಕ್ತಿಯ ಪ್ರತೀಕ. ಕನ್ನಡ ನಾಡು ಇಂಥ ಶಕ್ತಿಗಳನ್ನು ಒಳಗೊಂಡ ನಾಡು. ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟ ಮಾಡಿದ ಕಿತ್ತೂರು ಚೆನ್ನಮ್ಮ, ಕೆಳದಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಇವರೆಲ್ಲ ಪುರುಷರನ್ನೂ ಮೀರಿಸಬಲ್ಲ ಪೌರುಷ ಇರುವಂಥವರು. ದೇಶ ಕಟ್ಟಲು ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ, ಅಷ್ಟೇ ಸ್ಪೂರ್ತಿ ಕೂಡ ಬಹಳ ಮುಖ್ಯ. ದೇಶಕ್ಕೆ ಒಳ್ಳೆ ಇತಿಹಾಸ ಇದ್ರೆ ದೇಶಕ್ಕೆ ಒಳ್ಳೆ ಭವಿಷ್ಯವೂ ಇದೆ ಎಂದು ಹೇಳಿದರು.
ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಪ್ರಾರಂಭ ಮಾಡಿದ್ದಾರೆ. ಆತ್ಮ ರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಎಲ್ಲ ಪ್ರಾಣಿಗಳ ಮಾನವರ ಪಶು ಪಕ್ಷಿಗಳ ಗುಣಧರ್ಮ. ಭಗವಂತ ಆತ್ಮರಕ್ಷಣೆ ಗುಣ ಕೊಟ್ಟಿದ್ದಾನೆ. ಮೊದಲು ನಮ್ಮ ರಕ್ಷಣೆ ಆಮೇಲೆ ಸಮಾಜ, ರಾಜ್ಯ ಎಲ್ಲದರ ರಕ್ಷಣೆ. ಆತ್ಮ ರಕ್ಷಣೆಗೆಮೊದಲು ಬೇಕಾಗಿದ್ದು ಆತ್ಮ ವಿಶ್ವಾಸ. ಆತ್ಮ ವಿಶ್ವಾಸ ಇರುವವನು ಎಲ್ಲ ಸಂದರ್ಭದಲ್ಲಿ ಆತ್ಮ ರಕ್ಷಣೆ ಮಾಡಿಕೊಳ್ತಾನೆ. ಆತ್ಮರಕ್ಷಣೆಗೆ ಈ ತರಬೇತಿ ಟಾನಿಕ್. ಸಮಾಜಕಲ್ಯಾಣ ಇಲಾಖೆಯಿಂದ 50 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಇದಕ್ಕೆ ಒನಕೆ ಓಬವ್ವನ ಹೆಸರು ಇಟ್ಟಿದ್ದಾರೆ. ಓಬವ್ವನ ಶೂರತನ ನಮಗೆಲ್ಲ ಗೊತ್ತಿದೆ. ಆತ್ಮ ರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಗುಣ ಧರ್ಮ. ಭಗವಂತ ಪ್ರತಿಯೊಂದು ಜೀವಿಗೂ ರಕ್ಷಣೆ ಮಾಡಿಕೊಳ್ಳಲು ಕಲೆ ಕೊಟ್ಟಿದ್ದಾನೆ. ಮೊದಲು ಸ್ವಯಂ ರಕ್ಷಣೆ ಅತಿ ಅವಶ್ಯಕ. ಸ್ವಯಂ ರಕ್ಷಣೆ ಜೊತೆಗೆ ಆತ್ಮವಿಶ್ವಾಸ ಕೂಡ ಎಲ್ಲರಿಗೂ ಇರಬೇಕು ಎಂದು ತಿಳಿಸಿದರು.
75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾಡು ನುಡಿ ಕಟ್ಟುವ ಕೆಲಸಕ್ಕೆ ನಾವು ಕೈ ಹಾಕಿದ್ದೇವೆ. ಕನ್ನಡ ನಾಡಿನ ಜನರಿಗೆ ವಿದ್ಯೆ , ಕೆಲಸ ನೀಡುವುದನ್ನು ನಾವು ಮಾಡಬೇಕಿದೆ. ಬೋಸ್ ಅವರ ನೆನಪಲ್ಲಿ ವಿಭಿನ್ನ ಕಾರ್ಯಕ್ರಮ ರೂಪಿಸಿದ್ದೇವು. 75 ಎನ್ಸಿಸಿ ಹೊಸ ಯುನಿಟ್ ಸ್ಥಾಪನೆ ಮಾಡಿದ್ದೇವೆ. ಕರ್ನಾಟಕದ ಯುವಕರಿಗೆ ಮಿಲಿಟರಿ ಸಮಾನ ತರಬೇತಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಮಹಿಳೆಯರಿಗೆ ವಿಶೇಷ ತರಬೇತಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ಉತ್ಸವ ಮಾಡಲು ತೀರ್ಮಾನಿಸಿದ್ದೇವೆ. ಓಬವ್ವ ಮನೆಯಲ್ಲಿನ ಒನಕೆಯನ್ನು ಆತ್ಮರಕ್ಷಣೆಗೆ ಆಯಧವಾಗಿ ಬಳಸಿದಳು. ಆ ಪ್ರೇರಣೆ ಎಲ್ಲರಿಗೂ ಸಿಗಲಿ ಎಂದರು.