ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 60 ಜನ ಮಹನೀಯರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಇಂದು ಕೆಂಗೇರಿಯಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ವತಿಯಿಂದ ಆಯೋಜಿಸಲಾಗಿದ್ದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ರಾಜ್ಯಮಟ್ಟದಲ್ಲಿ ಆಯ್ಕೆ ಸಮಿತಿ ಇದೆ. ಸಮಿತಿಯಲ್ಲಿ ಕೃಷಿ ಸಚಿವರು, ಸಹಕಾರ ಮಹಾಮಂಡಳದ ಅಧ್ಯಕ್ಷರು, ಸಹಕಾರ ಇಲಾಖಾ ಪ್ರಧಾನ ಕಾರ್ಯದರ್ಶಿಯವರು, ಸಹಕಾರ ಸಂಘಗಳ ನಿಬಂಧಕರು ಮತ್ತು ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ) ಇದ್ದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚನೆಯಾಗಿರುತ್ತದೆ. ಸಮಿತಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಹಾಲು ಒಕ್ಕೂಟದ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಪ್ರತಿನಿಧಿ, ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಮಟ್ಟದ ಸಭೆಯ ಶಿಫಾರಸುಗಳನ್ನು ರಾಜ್ಯಮಟ್ಟದ ಸಮಿತಿ ಪರಿಶೀಲಿಸಿ ಅಂತಿಮವಾಗಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕಾರದ ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಶ್ರೇಷ್ಠ ಸಹಕಾರಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸುವ ಪ್ರಕ್ರಿಯೆ ಬಹುತೇಕ ಕರ್ನಾಟಕ ರಾಜ್ಯದಲ್ಲಿ ಮಾತ್ರವೆ ಎಂದು ಹೇಳಲಾಗುತ್ತಿದೆ.
ಈವರೆಗೆ 140 ಜನ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಇದೊಂದು ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ನೀಡುವ ಪ್ರೋತ್ಸಾಹ, ಬೆಂಬಲ ಎಂದು ಭಾವಿಸಲಾಗಿದೆ. ಇದು ಭಾರತದ ಸಹಕಾರ ಚಳವಳಿಯಲ್ಲಿ ದಾಖಲಾರ್ಹವಾಗಿದೆ ಎಂದು ವಿವರಿಸಿದರು.