ಬೆಂಗಳೂರು: 'ಸ್ಥಳೀಯ ಭಕ್ತ ಸಮೂಹ ಸಿದ್ದೇಶ್ವರ ಶ್ರೀಗಳ ಮಾತಿನಂತೆ ನಡೆದುಕೊಳ್ಳುತ್ತಿದೆ. ಎಲ್ಲ ರೀತಿಯ ಸಹಕಾರ ನೀಡುತ್ತಿರುವ ವಿಜಯಪುರ ಜನತೆಗೆ ಧನ್ಯವಾದ. ಬರುವ ಭಕ್ತರೂ ಕೂಡ ಶಾಂತಿ ಸಂಯಮದಿಂದ ಸ್ವಾಮೀಜಿಗಳ ಅಂತ್ಯಸಂಸ್ಕಾರಕ್ಕೆ ಸಹಕಾರ ನೀಡಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ವಿಜಯಪುರಕ್ಕೆ ತೆರಳುವ ಮುನ್ನ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿದರು. 'ಬಸನಗೌಡ ಪಾಟೀಲ್ ಯತ್ನಾಳ್, ಎಂಬಿ ಪಾಟೀಲ್ ಸೇರಿದಂತೆ ಜನಪ್ರತಿನಿಧಿಗಳೆಲ್ಲರೂ ಬಹಳ ಅಚ್ಚುಕಟ್ಟಾಗಿ ಜನರಿಗೆ ದರ್ಶನ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಬಹಳ ದೊಡ್ಡ ಪ್ರಮಾಣದಲ್ಲಿ ಸಹಕಾರ ಕೊಡುತ್ತಿದ್ದಾರೆ. ವಿಜಯಪುರ ಜನರು ಎಲ್ಲ ರೀತಿಯ ಸಹಕಾರ, ಊಟ, ತಿಂಡಿ, ನೀರಿನ ವ್ಯವಸ್ಥೆ ಮಾಡುತ್ತಿರುವುದನ್ನು ನೋಡಿದರೆ ಎಷ್ಟು ದೊಡ್ಡ ಪ್ರೀತಿ ವಿಶ್ವಾಸವನ್ನು ಸಿದ್ದೇಶ್ವರ ಗುರುಗಳು ಬಿಟ್ಟು ಹೋಗಿದ್ದಾರೆ ಮತ್ತು ಒಂದು ಸಂಸ್ಕೃತಿಯನ್ನು ಬಿಟ್ಟು ಹೋಗಿದ್ದಾರೆ ಎನ್ನುವುದು ಗೊತ್ತಾಗಲಿದೆ' ಎಂದರು.
ಸೋಮವಾರ ರಾತ್ರಿ ಕೂಡ ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಸಿಎಂ ಮಾತನಾಡಿದ್ದರು. 'ಜ್ಞಾನಯೋಗಿ ಸಿದ್ದೇಶ್ವರ ಗುರುಗಳು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಅವರ ಪ್ರವಚನದಲ್ಲಿ ಎಷ್ಟು ಶಾಂತಿ ಇತ್ತೋ ಅಷ್ಟೇ ಶಾಂತಿ ಮತ್ತು ಗೌರವದಿಂದ ಅವರ ಅಂತಿಮ ಯಾತ್ರೆ ಮಾಡೋಣ' ಎಂದು ತಿಳಿಸಿದ್ದರು.
'ಆಧುನಿಕ ಕಲಿಯುಗದಲ್ಲಿ ತ್ಯಾಗ, ಸತ್ಯವನ್ನು ಪ್ರತಿಪಾದನೆ ಮಾಡಿದಂತಹ ಒಬ್ಬ ಸಂತನನ್ನು ನಾವು ಇಂದು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಭಕ್ತ ಸಮೂಹ ದುಃಖದಲ್ಲಿ ಮುಳುಗಿದೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕತನ ಎನ್ನುವ ವಿವೇಕಾನಂದರ ಮಾತಿನಂತೆ ಸ್ವಾಮೀಜಿಗಳ ವಿಚಾರದಲ್ಲಿ, ತತ್ವ ಸಿದ್ಧಾಂತಗಳಲ್ಲಿ ಅವರ ಮಾತುಗಳಲ್ಲಿ, ನಡೆ-ನುಡಿಯಲ್ಲಿ ಅವರು ಬದುಕಿದ ರೀತಿಯನ್ನು ತೋರಿಸುತ್ತದೆ. ಅವರು ಸದಾ ನಮಗೆ ಮಾರ್ಗದರ್ಶಕರಾಗಿ ನಮ್ಮೊಂದಿಗೆ ಇರಲಿದ್ದಾರೆ ಎಂಬ ನಂಬಿಕೆ ಇದೆ' ಎಂದಿದ್ದರು.
'ಪೂಜ್ಯರ ಅಗಾಧ ಆಧ್ಯಾತ್ಮಿಕ ಭಂಡಾರ ಅಷ್ಟು ಸುಲಭವಾಗಿ ಈ ಜಗತ್ತಿನಿಂದ ಹೊರಹೋಗಲು ಸಾಧ್ಯವಿಲ್ಲ. ನಾವು ಯಾವ ರೀತಿ ಸ್ವಾಮಿ ವಿವೇಕಾನಂದರನ್ನು ನೆನಪಿಸಿಕೊಳ್ಳುತ್ತೇವೋ, ಮುಂದಿನ ಜನಾಂಗ ಸಿದ್ದೇಶ್ವರ ಗುರುಗಳನ್ನು ನೆನಪಿಸಿಕೊಳ್ಳಲಿದೆ. ನಾವು ಪೂಜ್ಯರಿಂದ ಪ್ರೇರೇಪಿತರಾಗಿ ಪ್ರಭಾವಿತರಾಗಿದ್ದೇವೆ. ಆಧ್ಯಾತ್ಮಿಕ ಚಿಂತನೆ, ಮಾನವೀಯ ಮೌಲ್ಯಗಳು ಮತ್ತು ಬದುಕನ್ನು ಯಾವ ರೀತಿ ಆತ್ಮಸಾಕ್ಷಿಯಾಗಿ, ಸ್ಥಿತ ಪ್ರಜ್ಞೆಯಿಂದ ಬದುಕಬೇಕು ಎನ್ನುವ ಕುರಿತು ಅವರು ತೋರಿದ ಮಾರ್ಗ ನಿಜಕ್ಕೂ ಅಮೋಘವಾದದ್ದು. ಗುರುಗಳು ಯಾವುದೇ ಪಂಥ ಅಥವಾ ವಿಚಾರವನ್ನು ನಂಬಿಕೊಂಡವರಲ್ಲ. ಬದಲಾಗಿ ಎಲ್ಲಾ ವಿಚಾರಗಳನ್ನು ಚೆನ್ನಾಗಿಯೇ ತಿಳಿದುಕೊಂಡಿದ್ದರು. ಹೀಗಾಗಿ ಅವರದ್ದೇ ಆದ ಒಂದು ತತ್ವ ಸಿದ್ಧಾಂತಗಳನ್ನು ಸರಳವಾಗಿ ಜನರಿಗೆ ತಿಳಿಸುತ್ತಿದ್ದರು. ಅವರೊಬ್ಬ ಜ್ಞಾನಿಯಾದರೂ, ಅವರ ನಡೆ-ನುಡಿಯಲ್ಲಿ ವ್ಯತ್ಯಾಸ ಇರಲಿಲ್ಲ' ಎಂದು ನುಡಿದಿದ್ದರು.