ಬೆಂಗಳೂರು:ರಾಜ್ಯ ಸಚಿವ ಸಂಪುಟ ಸಭೆ ಇದೇ ತಿಂಗಳ 25ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಯಲಿದೆ. ಎಲ್ಲ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ.
ಬಿಟ್‌ಕಾಯಿನ್ ಪ್ರಕರಣ ಬೆಳಕಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಸಂಪುಟ ಸಭೆ ಇದಾಗಿದೆ. ಪ್ರಕರಣದ ತನಿಖೆಯನ್ನು ಇಡಿಗೆ ವಹಿಸಲಾಗಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ತರನಾಗಿ ಆರೋಪ ಮಾಡುತ್ತಿದ್ದು, ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ಹಗರಣದಲ್ಲಿ ಶಾಮೀಲಾಗಿದ್ದಾರೆ. ಆರೋಪಿಯನ್ನು ಕಾಪಾಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ.
ಪ್ರಕರಣದಲ್ಲಿ ಸಿಎಂ ಹೆಸರು ಸಹ ಕೇಳಿ ಬಂದಿದ್ದು, ಈ ವಿಚಾರವಾಗಿ ಈಗಾಗಲೇ ಸಿಎಂ ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವಿಚಾರವಾಗಿ ಹೆಚ್ಚಿಗೆ ತಲೆಕೆಡಿಸಿಕೊಳ್ಳದಂತೆ ಪ್ರಧಾನಿ ತಮಗೆ ಸೂಚಿಸಿದ್ದರು ಅವರು ಹೇಳಿದ್ದರು. ಆದರೆ ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಇದೇ ವಿಚಾರವೇ ಸಚಿವ ಸಂಪುಟ ಸಭೆಯಲ್ಲಿಯೂ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಸಚಿವರಿಗೆ ಬಿಟ್‌ಕಾಯಿನ್ ವಿಚಾರವಾಗಿ ಇನ್ನಷ್ಟು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆದಿಲ್ಲ. ಈ ವಿಚಾರವಾಗಿಯೂ ಒಂದು ಚರ್ಚೆ ನಡೆದು ದಿನಾಂಕ ನಿಗದಿಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸಚಿವ ಸಂಪುಟ ಸಭೆ ಬಳಿಕ ಅಧಿವೇಶನದ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:ಜೆಡಿಎಸ್ ಮುಗಿಸಲು ಕಾಂಗ್ರೆಸ್ ನಾಯಕರ ಹುನ್ನಾರ ನಡೆಯುತ್ತಿದೆ : ಹೆಚ್ಡಿಕೆ ಆರೋಪ