ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರದ 2022-23ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ 8,409 ಕೋಟಿ ರೂ.ಅನುದಾನ ನೀಡಲಾಗಿದೆ.
ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಗರವಾಗಿದ್ದು, ಐಟಿ- ಬಿಟಿ ವಲಯಗಳಂತಹ ಜ್ಞಾನಾಧಾರಿತ ಉದ್ದಿಮೆಗಳ ನೆಲೆಯಾಗಿದೆ. ಈ ಎಲ್ಲಾ ಕಾರಣಗಳಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಜನ ಜೀವನ ಸುಗಮಗೊಳಿಸಲು ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಲಾದ ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು, ಪೆರಿಫೆರಲ್ ರಿಂಗ್ ರೋಡ್ ಮತ್ತಿತರ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಒತ್ತು ನೀಡಲಾಗುತ್ತಿದೆ. ಜೊತೆಗೆ ನಗರದ ಪರಿಸರದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಹಸಿರು ಹೊದಿಕೆ ಹೆಚ್ಚಿಸುವ ಮೂಲಕ ಸೌಂದರ್ಯ ವೃದ್ಧಿಗೂ ಆದ್ಯತೆ ನೀಡುವ ಬಜೆಟ್ ಮಂಡನೆ ಮಾಡಿದ್ದಾರೆ.
ಅಮೃತ್ ನಗರೋತ್ಥಾನ ಯೋಜನೆ: ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 6,000 ಕೋಟಿ ರೂ.ಗಳ ವೆಚ್ಚದಲ್ಲಿ ಅಮೃತ್ ನಗರೋತ್ಥಾನ ಯೋಜನೆಯನ್ನು ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಗ್ರೇಡ್ ಸೆಪರೇಟರ್, ಕೆರೆ ಅಭಿವೃದ್ಧಿ, ಬೃಹತ್ ನೀರುಗಾಲುವೆ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಕಟ್ಟಡಗಳು, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು, ಕೊಳಚೆ ಪ್ರದೇಶ ಅಭಿವೃದ್ಧಿ ಇತ್ಯಾದಿಗಳನ್ನು ಕೈಗೆತ್ತಿಕೊಳ್ಳಲಾಗುತ್ತೆ.
ಮೆಟ್ರೋ: 2021-22ನೇ ಸಾಲಿನಲ್ಲಿ ನಮ್ಮ ಮೆಟ್ರೊ ಹಂತ-2ರಲ್ಲಿ 7.53 ಕಿ.ಮೀ.ಗಳ ಹೆಚ್ಚುವರಿ ಮಾರ್ಗವನ್ನು ಕಾರ್ಯಾರಂಭ ಮಾಡಿದ್ದು, 2022-23ನೇ ಸಾಲಿನಲ್ಲಿ 33 ಕಿ.ಮೀ.ಗಳ ಮಾರ್ಗವನ್ನ ಸೇರಿಸಲಾಗುವುದು. ಇದರಿಂದ ಒಟ್ಟಾರೆ 89 ಕಿ.ಮೀಗಳ ಉದ್ದದ ಮೆಟ್ರೋ ಮಾರ್ಗವನ್ನು ಹೊಂದಿದಂತಾಗುತ್ತೆ. ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58.19 ಕಿ.ಮೀ.ಗಳು ಉದ್ದದ ಮೆಟ್ರೋ ಕಾಮಗಾರಿ ಪ್ರಾರಂಭಗೊಂಡಿದ್ದು, ಮಾರ್ಚ್ 2025ರೊಳಗೆ ಪೂರ್ಣಗೊಳ್ಳಲಿದೆ.
ಬೆಂಗಳೂರು ಮೆಟ್ರೊ ಹಂತ-3 ಯೋಜನೆಯನ್ನು ಅಂದಾಜು 11,250 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಯೋಜನಾ ವರದಿಯನ್ನು (ಡಿ.ಪಿ.ಆರ್) ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು. ಇದು ಹೆಬ್ಬಾಳದಿಂದ ಜೆ.ಪಿ. ನಗರದವರೆಗೆ 32 ಕಿ.ಮೀ.ಗಳ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ 13 ಕಿ.ಮೀ.ಗಳ ಮಾರ್ಗವನ್ನು ಒಳಗೊಂಡಿದೆ.
2022-23ನೇ ಸಾಲಿನಲ್ಲಿ 37 ಕಿ.ಮೀ. ಉದ್ದದ ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 36 ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ ಯೋಜನಾ ವರದಿ (ಡಿಪಿಆರ್) ತಯಾರಿ ಮಾಡಲಿದೆ.
ಇದನ್ನೂ ಓದಿ:ಕಾಶಿಯಾತ್ರೆಗೆ 5 ಸಾವಿರ ರೂ ಸಹಾಯಧನ; ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿಗೆ ವಿಶೇಷ ಪ್ಯಾಕೇಜ್ ಟ್ರಿಪ್
ಇನ್ನು ಪಾದಚಾರಿಗಳು ಮತ್ತು ರಸ್ತೆ ಬದಿ ವ್ಯಾಪಾರಿಗಳ ಸುರಕ್ಷತೆಗಾಗಿ ಹಾಗೂ ಮೆಟ್ರೋ ನಿಲ್ದಾಣವನ್ನು ಬಸ್ ನಿಲ್ದಾಣದೊಂದಿಗೆ ಸಂಪರ್ಕಿಸಲು ಬನಶಂಕರಿ ಜಂಕ್ಷನ್‌ನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸ್ಕೈವಾಕ್ ನಿರ್ಮಿಸಲಾಗುತ್ತದೆ.
ವೈಟ್ ಫೀಲ್ಡ್, ಕೆಆರ್ ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ ರೈಲ್ವೆ ಸಂಪರ್ಕದ ನಿಲ್ದಾಣಗಳಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ರೈಲ್ವೆಯೊಂದಿಗೆ ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯಲಿದೆ.
ರಾಜಧಾನಿಯ ಟ್ರಾಫಿಕ್ ನಿಯಂತ್ರಣಕ್ಕೆ ಸಿಎಂ ಮಂತ್ರ: ಬೆಂಗಳೂರು ನಗರದ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 2006 ರಿಂದ ನೆನೆಗುದಿಗೆ ಬಿದ್ದಿರುವ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೇ ಮದ್ರಾಸ್ ರಸ್ತೆಯನ್ನು ಹಾದು ಹೋಗಿ ಹೊಸೂರು ರಸ್ತೆ ಸೇರುವ 73 ಕಿ.ಮೀ ಉದ್ದ ಹಾಗೂ 100 ಮೀ ಅಗಲದ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಭೂ ಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರೂ.ಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಾಮಗಾರಿಯನ್ನು ನಿರ್ವಹಿಸಲು DBFOT ಮಾದರಿಯಲ್ಲಿ ಗುತ್ತಿಗೆದಾರರೇ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಭರಿಸುವುದರೊಂದಿಗೆ ಟೆಂಡರ್‌ನ್ನು ಕರೆದು ಕಾಮಗಾರಿಯನ್ನು ಚಾಲನೆಗೊಳಿಸಲಾಗುತ್ತೆ.
ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಿ, ಎಲ್ಲಾ ವಾಹನಗಳ ಸಿಗ್ನಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಗ್ರೇಡ್ ಸೆಪರೇಟರ್ ಮತ್ತು ಮೇಲುಸೇತುವೆ ಕಾಮಗಾರಿಗಳನ್ನ ಬಿಬಿಎಂಪಿ, ಬಿಡಿಎ, ಮತ್ತು ಎನ್ ಹೆಚ್ ಎ ಐ ಸಂಸ್ಥೆಗಳ ವತಿಯಿಂದ ಜಂಟಿಯಾಗಿ ನಡೆಯಲಿದೆ.
ಬಡಾವಣೆ ಬಿಡಿಎ ನಿರ್ಮಾಣ- ಬಿಬಿಎಂಪಿ ನಿರ್ವಹಣೆ:ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ನಿರ್ಮಿಸಲು 2,671 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಬಡಾವಣೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ. ಬಾಕಿ 1,297 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಪೂರ್ಣಗೊಳಿಸಿ ಆಧುನಿಕ ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತೆ.
ಸರ್.ಎಂ.ವಿಶ್ವೇಶರಯ್ಯ, ಬನಶಂಕರಿ 6ನೇ ಹಂತ ಮತ್ತು ಅಂಜನಾಪುರ ಬಡಾವಣೆಗಳಲ್ಲಿನ ರಸ್ತೆ, ಚರಂಡಿಗಳು, ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕವನ್ನು 404 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ( ಬಿಡಿಎ) ವತಿಯಿಂದ ನಿರ್ಮಿಸಿ ಮುಂದಿನ ನಿರ್ವಹಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ( ಬಿಬಿಎಂಪಿ) ಹಸ್ತಾಂತರಿಸಲಾಗುತ್ತೆ.
ಇನ್ನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ವಿವರಗಳನ್ನು ಬಿ ವಹಿಗೆ ದಾಖಲಿಸಲಾಗಿದ್ದು, ಈ ಸ್ವತ್ತುಗಳನ್ನು ಎ ವಹಿಗೆ ದಾಖಲಿಸಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮಗಳಡಿಯಲ್ಲಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹಸಿರೀಕರಣಕ್ಕೆ ಸಿಂಗಾಪುರ್ ಗ್ರೀನ್ ಎಕ್ಸ್ ಪೋ: ಬೆಂಗಳೂರಿನ ಹೃದಯ ಭಾಗದಲ್ಲಿರುವ NGEF ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ್ ಮಾದರಿಯಲ್ಲಿ ಗ್ರೀನ್ ಎಕ್ಸ್‌ಪೋ ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಗ್ರೀನ್ ಎಕ್ಸ್ ಪೋ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾನ, ಪರಿಸರ ಸ್ನೇಹಿ ಸಾರಿಗೆ, ಹಸಿರು ಮೂಲಸೌಕರ್ಯ, ನವೋದ್ಯಮ ಮುಂತಾದವುಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತೆ.
ಸಬ್ ಅರ್ಬನ್ ರೈಲು ಯೋಜನೆ: ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು 15,267 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 2026 ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. 148 ಕಿ.ಮೀ. ಉದ್ದದ ಈ ಯೋಜನೆಯಡಿ ನಾಲ್ಕು ಕಾರಿಡಾರ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಚಿಕ್ಕಬಾಣಾವರ-ಬೈಯ್ಯಪ್ಪನಹಳ್ಳಿ ಕಾರಿಡಾರ್‌ನ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಆರಂಭಿಸಲಾಗುತ್ತದೆ.
ಕಾವೇರಿ ನೀರು ಸರಬರಾಜು ಯೋಜನೆ: ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 775 ದಶಲಕ್ಷ ಲೀಟರ್ ಕಾವೇರಿ ನೀರನ್ನು ತರಲು 5,550 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು ಯೋಜನೆ (5ನೇ ಹಂತ) ಜಾರಿಯಲ್ಲಿದ್ದು, ಇಲ್ಲಿಯವರೆಗೆ 1,556 ಕೋಟಿ ರೂ.ಗಳು ವೆಚ್ಚವಾಗಿದೆ. ಯೋಜನೆಯು ಪ್ರಗತಿಯಲ್ಲಿದ್ದು, 2024-25ಕ್ಕೆ ಅಂತ್ಯವಾಗಲಿದೆ.
ಇದನ್ನೂ ಓದಿ:ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ; ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹500 ಕೋಟಿ
ಜಲ ಮಾಲಿನ್ಯ ತಡೆಗಟ್ಟಲು ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿರುವ ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣದ ಕಾಮಗಾರಿಯನ್ನು 1,500 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರು ಜಲಮಂಡಳಿಯ ವತಿಯಿಂದ ಕೈಗೊಳ್ಳಲಾಗುತ್ತೆ.
ಇನ್ನು ಮೆಗಾಸಿಟಿ ರಿವಾಲ್‌ವಿಂಗ್ ನಿಧಿ ಅಡಿಯಲ್ಲಿ ಅರ್ಕಾವತಿ ನೀರಿನ ಮೂಲವನ್ನು ಪುನರುಜ್ಜಿವನಗೊಳಿಸುವುದರ ಜೊತೆಗೆ ಎತ್ತಿನಹೊಳೆ ಯೋಜನೆಯಿಂದ 1.7 ಟಿ.ಎಂ.ಸಿ. ನೀರನ್ನು ಯೋಜನಾಬದ್ಧವಾಗಿ ಬಳಸಿಕೊಳ್ಳುವ ಸಲುವಾಗಿ 312 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳುತ್ತಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ವೇತನ ಕಾಮಗಾರಿಯನ್ನು 2022-23ನೇ ಸಾಲಿನಲ್ಲಿ ಮುಕ್ತಾಯಗೊಳಿಸಲಾಗುತ್ತದೆ.
ಬೆಂಗಳೂರು ನಗರದ ರಾಜಕಾಲುವೆಗಳಲ್ಲಿ ಕೊಳಚೆ ನೀರನ್ನು ಬೇರ್ಪಡಿಸಿ ಪುನರ್ ಬಳಕೆಗೆ ನಾಗರಿಕರಿಗೆ ವಿಹಾರ ತಾಣವಾಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ಕೆ -100 ಸಿಟಿಜನ್ ವಾಟರ್ ವೇ. ಈ ಯೋಜನೆಯಡಿ 195 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆಯನ್ನು ಕೆ.ಆರ್. ಮಾರುಕಟ್ಟೆ ಜಂಕ್ಷನ್ನಿಂದ ಬೆಳ್ಳಂದೂರು ಕೆರೆಯವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಬೆಂಗಳೂರು ನಗರದ ಮಳೆ ನೀರು ಹರಿವಿಕೆಗೆ ಬೃಹತ್ ಮಳೆ ನೀರುಗಾಲುವೆಗಳನ್ನು ಮತ್ತು ಮಳೆ ಸುರಿದಾಗ ಪ್ರವಾಹ ಉಂಟಾಗದಂತೆ ತಡೆಯಲು ರಾಜಕಾಲುವೆ ಅಭಿವೃದ್ಧಿಗಾಗಿ 1,500 ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲಾಗುತ್ತೆ. ಇನ್ನು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಸಾಮರ್ಥ್ಯದ ಸಂಪೂರ್ಣ ಬಳಕೆಯಾಗಿರುವ ಹಿನ್ನೆಲೆ ಅಲ್ಲಿರುವ ಕೈಗಾರಿಕಾ ಘಟಕಗಳ ಬೆಳವಣಿಗೆಗೆ ಇನ್ನೊಂದು ಸಣ್ಣ ಮತ್ತು ಪೂರಕವಾಗಿ ಅತಿ ಸಣ್ಣ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ದಿನೇ ದಿನೇ ಹೆಚ್ಚುತ್ತಿರುವ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ನಗರದ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ಆಯ್ದ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಸವಿವರವಾದ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ 89 ರೂ.ಗಳ ವೆಚ್ಚದಲ್ಲಿ ಬೆಂಗಳೂರಿನ ಆಯ್ದ 20 ಶಾಲೆಗಳನ್ನು ಬೆಂಗಳೂರು ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನ ಮಡಿವಾಳ ಮತ್ತು ಎಲೆಮಲ್ಲಪ್ಪಶೆಟ್ಟಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಬಿ.ಬಿ.ಎಂ.ಪಿವತಿಯಿಂದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು.