ಬೆಂಗಳೂರು :ನನೆಗುದಿಗೆ ಬಿದ್ದಿದ್ದ ಪಶು ವೈದ್ಯರ ನೇಮಕಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಬಂದು ಎರಡೂವರೆ ವರ್ಷ ಆಯ್ತು. ನಾನು ಎಲ್ಲಿ ಹೋದ್ರೂ ಪಶು ವೈದ್ಯರ ಕೊರತೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದೀಗ ಆ ಸಮಸ್ಯೆ ನಿವಾರಣೆಯಾಗಿದೆ. 458 ಪಶು ವೈದ್ಯರ ನೇಮಕಾತಿಗೆ ಸಿಎಂ ಅನುಮತಿ ನೀಡಿದ್ದಾರೆ ಎಂದರು.
ನಮ್ಮ ಇಲಾಖೆಯಲ್ಲಿ ಸುಮಾರು 1,083 ಹುದ್ದೆಗಳು ಖಾಲಿ ಇವೆ. ನಾನು 900 ಹುದ್ದೆಗಳ ಭರ್ತಿಗೆ ಕೇಳಿದ್ದೆ. ಈಗ ಸಿಎಂ 400 ಹುದ್ದೆ ಭರ್ತಿಗೆ ಸಮ್ಮತಿಸಿದ್ದಾರೆ. ಇದರ ಜೊತೆ 58 ಬ್ಯಾಕ್ಲಾಗ್ ಹುದ್ದೆಯನ್ನು ನೇಮಕ ಮಾಡಲಾಗುವುದು. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಅನುಮತಿ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲೆಗಳಲ್ಲಿ ಗೋ ಶಾಲೆಗಳ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಪ್ರಸ್ತುತ 19 ಜಿಲ್ಲೆಗಳಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಬೇರೆ ಬೇರೆ ಕಡೆ ನಾನು ಭೇಟಿ ನೀಡಿದ್ದೇನೆ. 11 ಜಿಲ್ಲೆಗಳಲ್ಲಿ ಗೋ ಶಾಲೆಗೆ ಸ್ಥಳ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.