ಕರ್ನಾಟಕ

karnataka

ETV Bharat / state

ತುಷ್ಟೀಕರಣದ ಹಳೆ ತಂತ್ರ ನಡೆಯಲ್ಲ: ಡಿಕೆ ಶಿವಕುಮಾರ್​​ಗೆ ಸಿಎಂ ತಿರುಗೇಟು - ಕಾಂಗ್ರೆಸ್ ಪಕ್ಷ

ಕಾಂಗ್ರೆಸ್ ಪಕ್ಷ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇವರೆಲ್ಲ ಸ್ಪಷ್ಟವಾಗಿ ತಮ್ಮ ನಿಲುವನ್ನು ಹೇಳಬೇಕು. ದೇಶದಲ್ಲಿ ಅಶಾಂತಿ ಉಂಟು ಮಾಡಿ ಇಡೀ ದೇಶವನ್ನು ಅಲ್ಲೋಲ ಕಲ್ಲೋಲ ಮಾಡುವ ಉಗ್ರಗಾಮಿಗಳ ಪರವಿದ್ದಾರೋ ಅಥವಾ ದೇಶವನ್ನು ಉಳಿಸುವಂತಹ ದೇಶಭಕ್ತರ ಪರವಾಗಿದ್ದಾರೋ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಹೇಳಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.

Chief Minister Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿc

By

Published : Dec 16, 2022, 12:57 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ತುಷ್ಟೀಕರಣ ರಾಜಕಾರಣದಿಂದ ಅಲ್ಪಸಂಖ್ಯಾತರ ಮತಗಳು ಬರಲಿವೆ ಎನ್ನುವ ಹಳೆ ತಂತ್ರವನ್ನೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗ ಬಳಕೆ ಮಾಡುತ್ತಿದ್ದಾರೆ. ಆದರೆ ಜನ ಜಾಗೃತರಾಗಿದ್ದಾರೆ, ಇದೆಲ್ಲ ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸೈನಿಕ ಸ್ಮಾರಕದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಹಗರಣ ಪ್ರಕರಣ ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಸ್ಫೋಟ ಬಳಸಿಕೊಳ್ಳಲಾಗುತ್ತಿದೆ ಎನ್ನುವವರು, 2017ರಲ್ಲಿ ಆ ಸಂಸ್ಥೆಗೆ ಅನುಮತಿ ಕೊಟ್ಟಿರುವುದೇ ಕಾಂಗ್ರೆಸ್ ಎನ್ನುವುದನ್ನು ಮರೆಯಬಾರದು ಎಂದರು.

ಅಕ್ರಮ ಮತಗಳನ್ನು ಮಾಡಿಸುವ ಪ್ರವೃತ್ತಿ ಕಾಂಗ್ರೆಸ್​​ಗೆ ಇದೆಯೇ ಹೊರತು ಬಿಜೆಪಿಗಲ್ಲ. ಯಾವ ಕ್ಷೇತ್ರದಲ್ಲಿ ಯಾವ ಯಾವ ಪ್ರದೇಶಗಳಿಂದ ಮತದಾರರು ಬಂದಿದ್ದಾರೆ ಎನ್ನುವುದು ಈ ಬಾರಿ ಸ್ಪಷ್ಟವಾಗಲಿದೆ. ಚುನಾವಣಾ ಆಯೋಗ ಒಂದು ಹೊಸ ತಾಂತ್ರಿಕ ವಿಧಾನವನ್ನು ಈ ಬಾರಿ ಅಳವಡಿಸಿದೆ. ಇದರಿಂದ ಎರಡು ಮೂರು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಪತ್ತೆಯಾಗಲಿದೆ. ಹೀಗಾಗಿ ಆ ಭಯದಿಂದ ಕಾಂಗ್ರೆಸ್ ನಮ್ಮ ವಿರುದ್ಧ ಈ ರೀತಿ ಗುಲ್ಲೆಬ್ಬಿಸುತ್ತಿದೆ. ಆದರೆ ಮತದಾರರ ಪಟ್ಟಿ ಕೇಸ್ ಬಗ್ಗೆ ನಾವು ತನಿಖೆ ಮಾಡಿಸಿದ್ದೇವೆ, ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಮುಂದುವರೆದು, ಒಬ್ಬ ವ್ಯಕ್ತಿ ಬಾಂಬ್​​ಗೆ ಬೇಕಿರುವ ಎಲ್ಲ ವಸ್ತುಗಳನ್ನ ಕುಕ್ಕರ್​​ನಲ್ಲಿ ಹಾಕಿಕೊಂಡು ಹೋಗುವಾಗ ಅದು ಸ್ಫೋಟಗೊಂಡಿದೆ. ಅದನ್ನು ಮಂಗಳೂರಿನಲ್ಲಿ ಸ್ಫೋಟ ಮಾಡಿಸುವ ಉದ್ದೇಶ ಹೊಂದಿರುವುದು ಬಹಳ ಸ್ಪಷ್ಟವಾಗಿದೆ. ಹತ್ತು ಹಲವು ಹೆಸರುಗಳನ್ನು ಬದಲಾಯಿಸಿಕೊಂಡಿದ್ದಾನೆ, ಗುರುತನ್ನು ಬದಲಾಯಿಸಿಕೊಂಡಿದ್ದಾನೆ. ಈ ಹಿಂದೆ ಎರಡು ಮೂರು ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಮತ್ತು ಉಗ್ರರ ಜೊತೆ ನಂಟಿರುವ ಸ್ಪಷ್ಟತೆ ಸಿಕ್ಕಿದೆ. ದೇಶದ ಹೊರಗಡೆಯೂ ಉಗ್ರರ ಜೊತೆಗಿನ ಲಿಂಕ್ ಇರುವುದು ಸ್ಪಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಕುಕ್ಕರ್ ಸ್ಫೋಟ ಆಕಸ್ಮಿಕವಾಗಿದೆ ಎನ್ನುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ನೀತಿಯೇ ಇದಾಗಿದೆ ಎಂದು ಟೀಕಿಸಿದರು.

ಹಿಂದಿನ ಹತ್ತು ಹಲವು ಉಗ್ರಗಾಮಿ ಚಟುವಟಿಕೆಗಳನ್ನು ಅತ್ಯಂತ ಕ್ಷುಲ್ಲಕದಿಂದ ನೋಡಿದ್ದಾರೆ, ಉಗ್ರರಿಗೆ ಬೆಂಬಲ ಕೊಡುವುದು, ಉಗ್ರನನ್ನ ಗಲ್ಲಿಗೇರಿಸಿದಾಗಲೂ ಟೀಕೆ ಮಾಡುವ ಪ್ರವೃತ್ತಿ ಅವರದ್ದು. ಚುನಾವಣೆಯ ಕಾರಣಕ್ಕೆ ತುಷ್ಟೀಕರಣ ಮಾಡುವ ಒಂದು ತಂತ್ರ ಇದು. ಈ ರೀತಿ ಮಾತನಾಡಿದರೆ ಅವರಿಗೆ ಅಲ್ಪಸಂಖ್ಯಾತರ ಮತಗಳು ಬರಲಿವೆ ಎನ್ನುವ ಹಳೆ ತಂತ್ರ ಇದಾಗಿದೆ. ಅದನ್ನೇ ಈಗ ಬಳಕೆ ಮಾಡುತ್ತಿದ್ದಾರೆ, ಆದರೆ ಜನ ಜಾಗೃತರಾಗಿದ್ದಾರೆ, ಇದೆಲ್ಲ ನಡೆಯುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇವರೆಲ್ಲಾ ಸ್ಪಷ್ಟವಾಗಿ ತಮ್ಮ ನಿಲುವನ್ನು ಹೇಳಬೇಕು. ದೇಶದಲ್ಲಿ ಅಶಾಂತಿ ಉಂಟುಮಾಡಿ ಇಡೀ ದೇಶವನ್ನು ಅಲ್ಲೋಲ ಕಲ್ಲೋಲ ಮಾಡುವ ಉಗ್ರಗಾಮಿಗಳ ಪರವಿದ್ದಾರೋ ಅಥವಾ ದೇಶವನ್ನು ಉಳಿಸುವಂತಹ ದೇಶಭಕ್ತರ ಪರವಾಗಿದ್ದಾರೋ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಹೇಳಬೇಕು. ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗಲೂ ಅವರ ತನಿಖೆಯನ್ನು ಪ್ರಶ್ನೆ ಮಾಡುವವರು ಇದ್ದಾರೆ. ಇಂತಹ ಪ್ರಶ್ನೆ ಮಾಡುವವರಿಂದಲೇ ಉಗ್ರಗಾಮಿ ಚಟುವಟಿಕೆಗೆ ಬಲ ಸಿಕ್ಕಂತಾಗಲಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಮುಖ್ಯಮಂತ್ರಿಯವರು ವಾಗ್ದಾಳಿ ನಡೆಸಿದರು‌.

ಇದನ್ನೂ ಓದಿ:ಸೈನಿಕರ ಕುಟುಂಬಕ್ಕೆ ಅಗತ್ಯ ಸವಲತ್ತು ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ABOUT THE AUTHOR

...view details