ಬೆಂಗಳೂರು:ನಕಾರಾತ್ಮಕವಾಗಿ ಮತ ಪಡೆಯಲು ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಪ್ರಯತ್ನ ಮಾಡುತ್ತಿವೆ. ನಾವು ಧನಾತ್ಮಕ ರೀತಿಯಲ್ಲಿ ಜನಮತ ಪಡೆಯಲು ಮುಂದಾಗುತ್ತೇವೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟು ಪಕ್ಷಕ್ಕೆ ಗೆಲುವು ತಂದು ಕೊಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪಕ್ಷದ ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷವು ಇನ್ನೊಬ್ಬರ ಅವಹೇಳನ ಮಾಡಿ ಮತ ಪಡೆಯಲು ಮುಂದಾಗಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. ಕೇಂದ್ರದ ಅನುದಾನ ಬಳಸಿ ಪಡಿತರ ಅಕ್ಕಿ ಕೊಟ್ಟರೂ ಅನ್ನ ಭಾಗ್ಯ ತಾವೇ ಕೊಟ್ಟಿದ್ದಾಗಿ ಬಿಂಬಿಸಿದ್ದರು ಎಂದು ಸಿಎಂ ವಾಗ್ದಾಳಿ ನಡೆಸಿದರು.
ಮೊದಲು ಕಾಂಗ್ರೆಸ್ಸಿಗರು ಉತ್ತರಿಸಲಿ: ಜನರ ಕಣ್ಣಲ್ಲಿ ಮಣ್ಣೆರೆಚುವ ಕಾರ್ಯವನ್ನು ಸದಾ ಕಾಲ ಕಾಂಗ್ರೆಸ್ ಮಾಡಿತ್ತು. ಅವರ ಅವಧಿಯಲ್ಲಿ ರಾಜ್ಯವು ಎಲ್ಲ ರಂಗಗಳಲ್ಲಿ ಹಿಂದುಳಿದಿತ್ತು. ಅವರ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿತ್ತು ಎಂದು ದೂರಿದರು. ಅಕ್ಕಿ, ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ನಲ್ಲೂ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ನೀರಾವರಿ, ನೇಮಕಾತಿಯಲ್ಲೂ ಭ್ರಷ್ಟಾಚಾರ, ಬಿಡಿಎದಲ್ಲಿ ರೀಡೂ ಭ್ರಷ್ಟಾಚಾರ, ಸೋಲಾರ್ ವಿದ್ಯುತ್ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದ್ದರು ಎಂದು ಆರೋಪಿಸಿದರು. ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿಬಿಟ್ಟರು. ಎಸಿಬಿ ಮುಂದೆ ಸಿದ್ದರಾಮಯ್ಯರದೂ ಸೇರಿದಂತೆ ಸುಮಾರು 60 ಕೇಸುಗಳಿದ್ದು, ಎಲ್ಲದಕ್ಕೂ ಬಿ ರಿಪೋರ್ಟ್ ಕೊಟ್ಟಿದ್ದರು. ಕಾಂಗ್ರೆಸ್ ತಮ್ಮ ಮೇಲಿನ ಆರೋಪಗಳಿಗೆ ಮೊದಲು ಉತ್ತರಿಸಬೇಕು. ಬಣ್ಣ ಬಯಲಾಗುವ ಭೀತಿ ಕಾಂಗ್ರೆಸ್ಸಿಗರದ್ದು. ಆರೋಪಗಳ ಮೇಲೆ ಕೌದಿ ಹೊಚ್ಚಿ ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಯ್ಯರದ್ದು ಸಿಎಂ ಹರಿಹಾಯ್ದರು.
ತಮ್ಮ ಮೇಲಿನ ಆರೋಪದ ದಾಖಲೆ ಕೊಟ್ಟರೆ ಅದನ್ನು ತನಿಖೆ ಮಾಡಿಸಲು ಸಿದ್ಧ ಎಂದು ಸವಾಲು ಹಾಕಿದ ಸಿಎಂ, ನೀರಾವರಿ ನಿಗಮದಲ್ಲಿ 2 ಸಮಿತಿ ಇತ್ತು. ಇವೆರಡನ್ನೂ ಮುಚ್ಚಿ ಹಾಕಿದವರು ಕಾಂಗ್ರೆಸ್ಸಿಗರು. ಆ ಮೂಲಕ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದರು ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ವೈಫಲ್ಯ, ಬಿಜೆಪಿಯ ಮನೆಮನೆಗೆ ನಳ್ಳಿನೀರು ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮನೆ, ಕರೆಂಟ್, ಶೌಚಾಲಯ, ಉಚಿತ ಪಡಿತರ- ಹೀಗೆ ಕುಟುಂಬಗಳ ಸಶಕ್ತೀಕರಣ ನಡೆದಿದೆ. ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮಕ್ಕಳಿಗೆ ಸೈಕಲ್, ವಿದ್ಯಾನಿಧಿಯಂಥ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.
ದುಡಿಯುವ ವರ್ಗಕ್ಕೆ ಬಲ ತುಂಬಲು ಕಾಯಕ ಯೋಜನೆ ಜಾರಿಗೊಳಿಸಿದ್ದೇವೆ. ಇಂಥ ಫಲಾನುಭವಿಗಳನ್ನು ಭೇಟಿ ಮಾಡಿ ನಮ್ಮ ಅಭಿಮಾನಿಗಳನ್ನು ಹೆಚ್ಚಿಸಿ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳವನ್ನೂ ಜನರಿಗೆ ತಿಳಿಸಬೇಕು ಎಂದು ವಿನಂತಿಸಿದರು. ಲಂಬಾಣಿ ತಾಂಡಾದ ಜನರಿಗೆ ನ್ಯಾಯ ಕೊಟ್ಟದ್ದನ್ನು ತಿಳಿಸಿಕೊಡಿ ಎಂದರು.