ಬೆಂಗಳೂರು: ನಾಳೆಯಿಂದ ಹತ್ತು ದಿನಗಳ ಕಾಲ ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಚೊಚ್ಚಲ ಅಧಿವೇಶನವಾಗಿದೆ. ಹೀಗಾಗಿ, ಪ್ರತಿಪಕ್ಷಗಳ ಟೀಕೆಯನ್ನು ಎದುರಿಸಿ ಅಧಿವೇಶನವನ್ನು ಸಫಲವಾಗಿ ನಡೆಸಲು ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ.
ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಿದ್ಧತೆ ಮಾಡಿಕೊಂಡಿವೆ. ಇದಕ್ಕಾಗಿ ಸಾಕಷ್ಟು ಅಸ್ತ್ರಗಳೂ ಪ್ರತಿಪಕ್ಷಗಳಿಗೆ ಸಿಕ್ಕಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೈಸೂರು ಅತ್ಯಾಚಾರ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆತುರ, ಕೊರೊನಾ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಿ ಹೋರಾಟ ನೀಡಲು ಸಿದ್ಧವಾಗಿವೆ.
ಪ್ರತಿಪಕ್ಷಗಳ ಹೋರಾಟಕ್ಕೆ ತಕ್ಕ ಉತ್ತರ ನೀಡಲು ಆಡಳಿತ ಪಕ್ಷ ಕೂಡ ಸಿದ್ಧತೆ ನಡೆಸುತ್ತಿದೆ. ಪ್ರತಿಪಕ್ಷಗಳು ಮಾಡಬಹುದಾದ ಆರೋಪಗಳ ಕುರಿತು ಸಂಬಂಧಪಟ್ಟ ಸಚಿವರು ದಾಖಲೆಗಳ ಸಮೇತ ಸದನದಲ್ಲಿ ಉತ್ತರ ನೀಡಬೇಕು ಎನ್ನುವ ಫರ್ಮಾನನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊರಡಿಸಿದ್ದಾರೆ. ಹಾಗಾಗಿ, ಅಗತ್ಯ ಸಿದ್ದತೆಗಳೊಂದಿಗೆ ಪೂರ್ಣ ತಯಾರಿಯಾಗಿಯೇ ಸಚಿವರು ಕಲಾಪಕ್ಕೆ ಹಾಜರಾಗಲಿದ್ದಾರೆ. ಅಲ್ಲದೇ, ಕಲಾಪಕ್ಕೆ ಶಾಸಕರು ಗೈರಾಗಬಾರದು. ಎಲ್ಲ ಶಾಸಕರು ಪ್ರತಿಪಕ್ಷಗಳ ಟೀಕೆ ವೇಳೆ ಸರ್ಕಾರದ ಪರ ಸಚಿವರ ಬೆಂಬಲಕ್ಕೆ ನಿಲ್ಲಬೇಕು ಎಂದು ಸೂಚಿಸಿದ್ದಾರೆ.