ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರ ಹೆಚ್ಚಿದೆ. ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಳೆಹಾನಿ ಪ್ರದೇಶಗಳ ಪ್ರದಕ್ಷಿಣೆ ನಡೆಸಿ, ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಮಹದೇವಪುರ ಹಾಗೂ ಬೊಮ್ಮನಹಳ್ಳಿ ಭಾಗಗಳಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ಅಪಾರ ಪ್ರಮಾಣದಲ್ಲಿ ಮಳೆ ಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಇಂದು ಮಳೆ ಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದರು.
ಮೊದಲಿಗೆ ಮಾರತ್ತಹಳ್ಳಿ ಮುಖ್ಯರಸ್ತೆಯ ಡಿಎನ್ಎ ಅಪಾರ್ಟ್ಮೆಂಟ್ ಬಳಿ ವೀಕ್ಷಣೆ ನಡೆಸಿದರು. ಅಲ್ಲಿ 30 ಅಡಿ ಕಾಲುವೆಯನ್ನು 4 ಅಡಿ ಅಗಲಕ್ಕೆ ಒತ್ತುವರಿ ಮಾಡಲಾಗಿತ್ತು. ಕೂಡಲೇ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈಟ್ಫೀಲ್ಡ್ನಲ್ಲಿ ಸಿಎಂ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ ಮಾಡಿದರು. ಸ್ಥಳೀಯರು ಮಳೆಯಿಂದಾದ ಹಾನಿಯನ್ನು ಸಿಎಂ ಗಮನಕ್ಕೆ ತಂದಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ, ಬಿ. ಎ. ಬಸವರಾಜ ಬೈರತಿ, ಶಾಸಕ ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಒತ್ತುವರಿ ತೆರವುಗೊಳಿಸಿ: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕಳೆದೊಂದು ವಾರದಿಂದ ಮಳೆ ಬರ್ತಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತೀ ಹೆಚ್ಚು ಹಾನಿ, ಸಮಸ್ಯೆ ಆಗಿದೆ. ಈ ಭಾಗಗಳಲ್ಲಿ ಹೆಚ್ಚು ಕೆರೆಗಳಿರೋದಿಕ್ಕೆ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ, ರಾಜಾಕಾಲುವೆಗಳಿಗೆ ಹರಿದಿದೆ. ಕೆರೆ ನೀರು, ಮಳೆ ನೀರು ಸೇರಿ ರಾಜಕಾಲುವೆ ಸಾಮರ್ಥ್ಯ ಮೀರಿ ಹರಿದು ಸಮಸ್ಯೆ ಆಗಿದೆ. ಒತ್ತುವರಿ ತೆರವು ಬಳಿಕ ರಾಜಾ ಕಾಲುವೆಗಳ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ಒತ್ತುವರಿ ತೆರವಿಗೆ ಸೂಚನೆ: ಎಲ್ಲ ಕಡೆ ಎಸ್ಟಿಮೇಟ್ ಮಾಡಿ ರಾಜಾಕಾಲುವೆಗಳ ನಿರ್ಮಾಣ ಮಾಡ್ತೇವೆ. ಶಾಶ್ವತ ರಾಜಾ ಕಾಲುವೆಗಳ ನಿರ್ಮಾಣ ಪ್ರಾಶಸ್ತ್ಯದಲ್ಲಿ ಮಾಡ್ತೇವೆ. ರಾಜಾ ಕಾಲುವೆಗಳ ಒತ್ತುವರಿಯಿಂದಾಗಿಯೂ ಸಮಸ್ಯೆ ಹೆಚ್ಚಾಗಿದೆ. ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ ಎಂದು ಹೇಳಿದರು.