ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವುದು ಹುಬ್ಬಳ್ಳಿ:ಏಳನೇ ಪರಿಷ್ಕೃತ ವೇತನ ಜಾರಿಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸಿದ್ಧಪಡಿಸುತ್ತಿದ್ದೇವೆ. ಮಧ್ಯಂತರ ವರದಿ ಬಂದ ಕೂಡಲೇ ಜಾರಿ ಮಾಡಲಾಗುತ್ತದೆ. 2023-24 ನೇ ಸಾಲಿನಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್ನಲ್ಲಿ ಏಳನೇ ವೇತನ ಆಯೋಗ ಜಾರಿಗೆ ಹಣ ತೆಗೆದಿಟ್ಟಿದ್ದೇವೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಚುನಾವಣಾ ಏಜೆಂಟರಂತೆ ವರ್ತಿಸುತ್ತಾರೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಭೇಟಿಯಿಂದ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ. ಮೋದಿ ಅವರು ಬಂದ ಮೇಲೆ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್ಸಿಗರು ವಿಚಲಿತಗೊಂಡಿದ್ದಾರೆ. ಸಿದ್ದರಾಮಯ್ಯ ಅವರು ಅನುಭವಿ ಮಾಜಿ ಸಿಎಂ ಆಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಹಾಗಾದರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಜಯನಗರದ ಹೊಸ ವಾಣಿಜ್ಯ ಸಂಕೀರ್ಣದ ಮಳಿಗೆ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಎನ್ ಆರ್ ರಮೇಶ್
ಈಗಾಗಲೇ ಪಕ್ಷ ಬಲವರ್ಧನೆ ನಡೆಯುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಪಕ್ಷ ಬಲವರ್ಧನೆ ದೃಷ್ಟಿಯಿಂದ ಮತ್ತೆ ರಾಜ್ಯಕ್ಕೆ ಬರುತ್ತಾರೆ. ದಾವಣಗೆರೆಯಲ್ಲಿ ಮಾರ್ಚ್ ತಿಂಗಳಿನಿಂದ ರಥಯಾತ್ರೆ ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಜಕೀಯ ನಿವೃತ್ತಿ ಬಗ್ಗೆ ಎಚ್ಡಿಕೆ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರದ್ದು ಇನ್ನೂ ನಿವೃತ್ತಿಯಾಗುವ ವಯಸ್ಸಲ್ಲ. ಇನ್ನೂ ಸೇವೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲಾ ನಡೆಯುತ್ತಿರುತ್ತದೆ. ಜನ ಪ್ರಬುದ್ಧರಾಗಿದ್ದು, ಎಲ್ಲವನ್ನೂ ಗಮನಿಸುತ್ತಾರೆ. ಚುನಾವಣೆಯಿಂದ ಚುನಾವಣೆಗೆ ಇನ್ನೂ ಪ್ರಬುದ್ಧರಾಗುತ್ತಿದ್ದಾರೆ. ನಾವು ಮಾತನಾಡುವಾಗ ಅದರ ಹಿಂದಿರುವ ಚಿಂತನೆ, ಕಲ್ಪನೆ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಲ್ಕು ಮಂದಿ ಗೋ ಬ್ಯಾಕ್ ಅಂದರೇ ತಲೆಕೆಡಿಸಿಕೊಳ್ಳಲ್ಲ. ಗೋ ಬ್ಯಾಕ್ ಅಭಿಯಾನ ಮಾಮೂಲಿಯಾಗಿದೆ ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ಜೈಲಿನಲ್ಲಿದ್ದಾಗ ಡೈರಿ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಮಗಳು ಡೈರಿ ಬಿಡುಗಡೆ ಮಾಡುವುದು ನನಗೆ ಗೊತ್ತಿಲ್ಲ ಎಂದರು. ಇನ್ನು, ಹಿರಿಯ ನಾಯಕರ ಕಾಲಿಗೆ ಬಿದ್ದಿದ್ದರೆ ನಾನೂ ಸಿಎಂ ಆಗ್ತಿದ್ದೆ ಎಂಬ ಯತ್ನಾಳ್ ಹೇಳಿಕೆಗೆ ಉತ್ತರಿಸಲು ಸಿಎಂ ನಿರಾಕರಿಸಿದರು.
ಇದನ್ನೂ ಓದಿ:ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಬಿಟ್ಟರೇ ಜೋಕೆ: ಸರ್ಕಾರಕ್ಕೆ ಎಚ್ಚರಿಸಲು ಹೋರಾಟಕ್ಕಿಳಿದ ದಾವಣಗೆರೆ ರೈತರು
ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಮುಷ್ಕರ:ಏಳನೇ ಪರಿಷ್ಕೃತ ವೇತನ ಜಾರಿಗಾಗಿ ನಾಳೆಯಿಂದ ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಸರ್ಕಾರದಿಂದ ಸರಿಯಾದ ಭರವಸೆ ಸಿಕ್ಕಿಲ್ಲ ಎಂದು ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರಕ್ಕಾಗಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಎಲ್ಲಾ ನೌಕರರು ಜೊತೆಯಾಗಿ ನಾಳೆಯಿಂದ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ.