ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಮೂರು ಲಕ್ಷ ಎಲ್‍ಇಡಿ ಬೀದಿ ದೀಪ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಅವರ ಪ್ರಶ್ನೆಗೆ ಸಿಎಂ ಉತ್ತರಿಸಿದರು. ಐದು ಹಂತದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಕೆಯಾಗಲಿದೆ. ಐದೂ ಕಡೆಯೂ ಏಕಕಾಲಕ್ಕೆ ಪ್ರಾರಂಭಿಸಲು ಸೂಚಿಸಲಾಗುವುದು ಎಂದು ಹೇಳಿದರು.
ಒಂದು ವೇಳೆ ನಿಗದಿತ ಸಮಯದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸದಿದ್ದರೆ, ಈಗಾಗಲೇ ಆಗಿರುವ ಕರಾರನ್ನು ಮರು ಪರಿಶೀಲನೆ ಮಾಡಲಾಗುವುದು. ಕಾಲ ಮಿತಿಯಲ್ಲಿ ಮಾಡದಿದ್ದರೆ ವಾರಕ್ಕೆ ಒಂದು ಲಕ್ಷ ರೂ. ದಂಡ ವಿಧಿಸುವ ಕರಾರು ಸಹ ಇದೆ ಎಂದರು.
ಕಳೆದ 2018ರಲ್ಲಿ ಬಿಬಿಂಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು ಎಲ್‍ಇಡಿ ಬಲ್ಬ್ ಅಳವಡಿಸುವ ಪ್ರಕ್ರಿಯೆ ಪ್ರಾರಂಭವಾದರೂ 2019ರಲ್ಲಿ ಅನುಮೋದನೆಯಾಗಿತ್ತು. ಎರಡು ವರ್ಷಗಳ ಕಾಲ ಅನುಮೋದನೆ ಗುತ್ತಿಗೆ ನೀಡುವುದರಲ್ಲೇ ಕಳೆದು ಹೋಗಿದೆ. ಹಲವು ಕಡೆ ಡಾರ್ಕ್ ಸ್ಪಾಟ್ ಸೃಷ್ಟಿಯಾಗಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಶೇ.85.5ರಷ್ಟು ಗರಿಷ್ಠ ವಿದ್ಯುತ್ ಉಳಿಸುವ ಉದ್ದೇಶದಿಂದ ಶಾಪುರ್‍ಜಿ-ಪಲೊಂಜಿ ಕಂಪನಿ, ಎಸ್‍ಎಂಸಿ ಇನ್‍ಫ್ರಾಸ್ಟ್ರಕ್ಚರ್ ಪ್ರೈ ಲಿಮಿಟೆಡ್ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ಗೆ ವಹಿಸಲಾಗಿದೆ. ಯೋಜನೆಯ ಒಪ್ಪಂದದ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಲಕ್ಷದ 85 ಸಾವಿರದ 286 ಬೀದಿ ದೀಪಗಳನ್ನು ಐದು ಹಂತ, 30 ತಿಂಗಳಲ್ಲಿ ಅಳವಡಿಸಬೇಕಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ 1 ಲಕ್ಷ ಬೀದಿ ದೀಪಗಳನ್ನು ಆರ್ ಆರ್ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ ವಲಯದ ವಾರ್ಡ್ ಗಳನ್ನು ಆಯ್ಕೆ ಮಾಡಲಾಗಿದೆ. 2020ರ ಜೂನ್ 18ರಿಂದ ಸರ್ವೆ ಕಾರ್ಯ ಪ್ರಾರಂಭಿಸಲಾಗಿದೆ. ಜಂಟಿ ಸಮೀಕ್ಷೆ ಹಾಗೂ ಬೇಸ್‍ಲೈನ್ ಸರ್ವೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿದರು.