ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ ಇಬ್ಬರು ಮೃತಪಟ್ಟ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಿದ್ದು, ಯಾವ ರೀತಿಯ ತನಿಖೆ ನಡೆಸಬೇಕು ಎಂದು ನಾಳೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೆಟ್ರೊ ಪಿಲ್ಲರ್ ಬಿದ್ದು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ನಡೆಸಿದರು. ಮೆಟ್ರೊ ಎಂಡಿ, ಡಿಸಿಪಿ ಹಾಗೂ ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿ ಮೆಟ್ರೋ ಪಿಲ್ಲರ್ ಉರುಳಿದ ಘಟನೆ ಕುರಿತು ಸಮಗ್ರವಾದ ವಿವರ ಪಡೆದುಕೊಂಡರು. ಘಟನೆಗೆ ಕಾರಣ ಹುಡುಕುವ ಪ್ರಯತ್ನ ನಡೆಸಿದರು. ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿರುವ ಇತರ ಮಾರ್ಗದ ಕಾಮಗಾರಿಗಳ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇವತ್ತಿನ ಸಭೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಯಾರಿದ್ದಾರೋ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಯಾವುದೋ ಸಣ್ಣ ಪುಟ್ಟವರಲ್ಲ, ಹಿರಿಯ ಅಧಿಕಾರಿಗಳು, ಮುಖ್ಯಸ್ಥರು ಯಾರಿದ್ದಾರೋ ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಮತ್ತು ಇದರಲ್ಲಿ ನೇರವಾಗಿ ಯಾರಾದರೂ ಭಾಗಿಯಾಗಿದ್ದರೆ ಅಂತವರನ್ನ ಅಮಾನತುಗೊಳಿಸಬೇಕು ಎಂದು ತಿಳಿಸಿದ್ದೇನೆ ಎಂದರು.
ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಯಾರು? ಯಾವ ಕಂಪನಿ ಗುತ್ತಿಗೆ ಪಡೆದಿದೆ ಹಾಗೂ ಅದರ ಪ್ರಮುಖರು ಯಾರಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಸಣ್ಣಪುಟ್ಟವರ ವಿರುದ್ಧ ದೂರು ದಾಖಲು ಮಾಡುವಂತಿಲ್ಲ ಎಂದು ಸೂಚಿಸಿದ್ದೇನೆ. ಉನ್ನತ ಮಟ್ಟದ ತನಿಖೆಗೆ ನಿರ್ಧರಿಸಿದ್ದು, ಯಾವ ರೀತಿ ಮಾಡಬೇಕು ಎನ್ನುವ ಕುರಿತು ನಾಳೆ ತೀರ್ಮಾನ ಮಾಡಲಾಗುತ್ತದೆ ಎಂದರು.
ಮೃತರ ಕುಟುಂಬಕ್ಕೆ ಈಗಾಗಲೇ ಪರಿಹಾರ ಘೋಷಿಸಲಾಗಿದೆ. ಮೆಟ್ರೋ ನಿಗಮದವರು 20 ಲಕ್ಷ ಘೋಷಣೆ ಮಾಡಿದ್ದಾರೆ. ನಾನು ಕೂಡ 10 ಲಕ್ಷ ಘೋಷಣೆ ಮಾಡಿದ್ದೇನೆ. ಪ್ರಶ್ನೆ ಇರುವುದು ಯಾಕೆ ಈ ರೀತಿ ಆಗಿದೆ. ಇಷ್ಟೊಂದು ಅಸುರಕ್ಷಿತವಾಗಿ ಹೇಗೆ ಕೆಲಸ ಮಾಡಿದರು. ಇದಕ್ಕೆ ಯಾರು ಕಾರಣೀಭೂತರು. ಅದನ್ನು ಪತ್ತೆ ಹಚ್ಚಿ ಮುಂದೆ ಈ ರೀತಿ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತನಿಖೆ ಆಗಬೇಕು. ಆ ನಿಟ್ಟಿನಲ್ಲಿ ಮುಂದುವರೆಯಬೇಕು ಹಾಗೂ ತಾಂತ್ರಿಕವಾಗಿ ಯಾವ ಲೋಪವಿದೆ ಅದು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
20 ಲಕ್ಷ ರೂ. ಪರಿಹಾರ..:ನಗರದ ನಾಗವಾರ ರಿಂಗ್ ರಸ್ತೆಯ ಹೆಚ್ಬಿಆರ್ ಲೇಔಟ್ನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಈ ಘೋಷಣೆ ಮಾಡಿದ್ದಾರೆ. ಇಂದು ಮಧ್ಯಾಹ್ನ ನಡೆದ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಈ ಪ್ರಕಟಣೆ ಮಾಡಿದ್ದಾರೆ.
18 ಮೀ. ಎತ್ತರದ ಪಿಲ್ಲರ್ ಬಿದ್ದಿದೆ. ಘಟನೆಯಲ್ಲಿ ತಾಯಿ, ಮಗು ಮೃತಪಟ್ಟಿವೆ. ಈ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಿದ್ದು, ಇನ್ನಷ್ಟು ಮಾಹಿತಿಗಾಗಿ ಎಲ್ಲ ಎಂಜಿನಿಯರ್ ಜೊತೆಗೆ ಮಾತನಾಡುತ್ತೇನೆ. ಇಂಡಿಯನ್ ಇನ್ಸಿಟ್ಯೂಟ್ ಸೈನ್ಸ್ಗೆ ಸಹ ಈ ಸಂಬಂಧ ಮನವಿ ಮಾಡುತ್ತೇವೆ. ಅವರು ಬಂದು ಪರಿಶೀಲನೆ ನಡೆಸುತ್ತಾರೆ. ಜೊತೆಗೆ ಚೀಫ್ ಎಂಜಿನಿಯರ್, ಕಂಟ್ರ್ಯಾಕ್ಟರ್ ಗೆ ನೋಟಿಸ್ ಕೊಡುತ್ತೇವೆ ಎಂದು ವಿವರಿಸಿದ್ದಾರೆ.
ಐವರ ವಿರುದ್ಧ ಪ್ರಕರಣ ದಾಖಲು:ನಿರ್ಮಾಣ ಹಂತದ ನಮ್ಮ ಮೆಟ್ರೊ ಪಿಲ್ಲರ್ ಬಿದ್ದು ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಅವರು ದೂರು ನೀಡಿದ್ದು, ಸೈಟ್ ಇಂಜಿನಿಯರ್ಸ್, ಕಂಟ್ರ್ಯಾಕ್ಟರ್ಸ್, BMRCL ಅಧಿಕಾರಿಗಳು, ಸೈಟ್ ಇನ್‌ಚಾರ್ಜ್ ಆಫೀಸರ್ಸ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಗುತ್ತಿಗೆದಾರ, ಅಧಿಕಾರಿಗೆ BMRCL ನೋಟಿಸ್ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಐಐಎಸ್ಸಿಗೆ ಮನವಿ ಮಾಡಲಾಗಿದೆ. ಆಂತರಿಕ ತಾಂತ್ರಿಕ ತಂಡದಿಂದಲೂ ಘಟನೆ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಓದಿ:ಮೆಟ್ರೊ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ಬಿಎಂಆರ್ಸಿಎಲ್ನಿಂದ 20 ಲಕ್ಷ ರೂ. ಘೋಷಣೆ