ಬೆಂಗಳೂರು: ಕನ್ನಡ ನಾಡನ್ನು ಸಮೃದ್ಧಿಯ ನಾಡನ್ನಾಗಿ ಮಾಡಲು ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಪ್ರೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಬೃಹತ್ ಮೆಟ್ಟಿಲುಗಳು ಬಳಿ ಇಂದು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ “ ಪ್ರಗತಿಯ ಪ್ರತಿಮೆ” ಅನಾವರಣದ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕರ್ನಾಟಕದಲ್ಲಿ ಅಭಿವೃದ್ಧಿ ನಿರಂತರವಾಗಿ ನಡೆಯಬೇಕೆಂಬ ಆಶಯದಿಂದ ಈ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರುವ ಸೂಚನೆಯನ್ನು ನೀಡುತ್ತಿದೆ.
ನವಕರ್ನಾಟಕದಿಂದ ನವಭಾರತ ನಿರ್ಮಾಣದ ಧ್ಯೇಯವನ್ನು ಸಾಧಿಸುವ ಆತ್ಮವಿಶ್ವಾಸವನ್ನು ಪ್ರಗತಿಯ ಪ್ರತಿಮೆ ನೀಡಲಿದೆ. ನವೆಂಬರ್ 11 ರಂದು ಪ್ರಧಾನಿ ಮೋದಿಯವರ ಹಸ್ತದಿಂದ ‘ಪ್ರಗತಿಯ ಪ್ರತಿಮೆ’ ಅನಾವರಣಗೊಳ್ಳುತ್ತಿದ್ದು, ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಮುಖ್ಯಮಂತ್ರಿಗಳು ವಿನಂತಿಸಿದರು.
ಅಭಿವೃದ್ಧಿ ಹಾಗೂ ಪ್ರಗತಿಯ ಸಂಕೇತ: ನಾವು ನಮ್ಮ ಇತಿಹಾಸವನ್ನು ಮರೆತರೆ ಭವಿಷ್ಯ ಮಂಕಾಗುತ್ತದೆ. ನಾಡು ಕಟ್ಟಿದ ಪ್ರಭುವಿಗೆ ಗೌರವ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಬಸವಣ್ಣ, ಬುದ್ಧ, ಮಹಾವೀರರು ಸೇರಿದಂತೆ ಎಲ್ಲ ತತ್ವಜ್ಞಾನಿಗಳೆಲ್ಲರೂ ಆಡಳಿತ ನಡೆಸಿದವರೇ. ಆಧ್ಯಾತ್ಮಿಕತೆಯಿಂದ ಜನಕಲ್ಯಾಣವಾಗಬೇಕೆಂದು ಪರಿವರ್ತನೆಯಾದವರು. ಆದರೆ ಕೆಂಪೇಗೌಡರು ಜನರ ನಡುವೆಯೇ ಇದ್ದು ಜನರ ಬದುಕನ್ನು ಕಟ್ಟಿದವರು. ಆದ್ದರಿಂದ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸುವ ತೀರ್ಮಾನವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೈಗೊಂಡರು.
ನಾಡಪ್ರಭು ಕೆಂಪೇಗೌಡರ ಬದುಕು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯದ ಎಲ್ಲ ಪುಣ್ಯಭೂಮಿಗಳಿಂದ ಮೃತ್ತಿಕೆಯನ್ನು ತಂದು ಪ್ರತಿಮೆಯಲ್ಲಿ ಸೇರಿಸಲಾಗುತ್ತಿದೆ. ಕೆಂಪೇಗೌಡರ ಪ್ರೇರಣೆ ಕನ್ನಡ ನಾಡಿನ ಮಣ್ಣಿನ ಕಣಕಣದಲ್ಲಿಯೂ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಮೆರಿಕಾದ Statue of Liberty, ಏಕತೆಯ ಸಂಕೇತವಾಗಿ Statue of Unity, ಅಭಿವೃದ್ಧಿ ಹಾಗೂ ಪ್ರಗತಿಯ ಸಂಕೇತವಾಗಿ Statue of prosperity ನಿರ್ಮಿಸಲಾಗಿದೆ ಎಂದರು.