ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಲಾಗಿಲ್ಲ. ಇದಕ್ಕೆ ಯಾರು ಹೊಣೆಗಾರರು ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಕಾಂಗ್ರೆಸ್ಗೆ ಟಾಂಗ್ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಂಡಂತೆ ಮೀಸಲಾತಿಯ ಲಾಭ ಕೆಲವೇ ಕೆಲವು ಜನರಿಗೆ ಸಿಕ್ಕಿದೆ. ದೊರೆತಿರುವವರಿಗೇ ಸೌಲಭ್ಯಗಳು ದೊರೆಯುತ್ತಿದ್ದು, ಅವರಿಗೆ ಸಂವಿಧಾನದ ಈ ಹಕ್ಕನ್ನು ಹೇಗೆ ಪಡೆಯಬೇಕು ಎಂಬುದು ಕರಗತವಾಗಿದೆ. ಹಳ್ಳಿಯ ಜನರಿಗೆ, ಬಡವರಿಗೆ ಈ ಮೀಸಲಾತಿ ಕುರಿತು ಸ್ವಲ್ಪವೂ ಅರಿವಿಲ್ಲ. ನಮ್ಮ ಹಕ್ಕು ನಮಗೆ ತಿಳಿಯದಿದ್ದರೆ ಅದನ್ನು ಪಡೆಯುವುದು ಕಷ್ಟವಾಗುತ್ತದೆ ಎಂದರು.
ದೇಶ ಹಾಗೂ ರಾಜ್ಯ ಹಲವಾರು ಆರ್ಥಿಕ ಸ್ತರಗಳ ಹಿನ್ನೆಲೆಯಿಂದ ಬಂದಿರುವ ಜನ ಮತ್ತು ಜನಾಂಗಗಳಿಂದ ಕೂಡಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕೂಡಾ ಸಾಮಾಜಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತುಳಿತಕ್ಕೊಳಪಟ್ಟ ಹಲವಾರು ಸಮುದಾಯಗಳಿವೆ. ಇಂತಹ ಜನಾಂಗಗಳನ್ನು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಗುರುತಿಸಿ ಈ ಜನಾಂಗಳಿಗೆ ಹಕ್ಕುಗಳನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತಂದು ಅವರಿಗೆ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಿಕೊಂಡು ತಮ್ಮ ಕುಟುಂಬ ಹಾಗೂ ದೇಶ ಕಟ್ಟಲು ನೆರವಾಗಿದ್ದಾರೆ ಎಂದರು.
ಮೀಸಲಾತಿ ಮತ್ತು ಈ ಎಲ್ಲ ಸಮುದಾಯಗಳಿಗೆ ನೀಡಿರುವ ಸರ್ಕಾರದ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಮುಟ್ಟಿದೆ ಹಾಗೂ ಎಷ್ಟು ಜನರ ಜೀವನ ಗುಣಮಟ್ಟ ಸುಧಾರಿಸಿದೆ. ಅವಕಾಶಗಳು ಯಾವ ಜನಾಂಗಕ್ಕೆ ದೊರೆತಿದೆ ಹಾಗೂ ಯಾರಿಗೆ ದೊರೆತಿಲ್ಲ ಎಂಬ ಸಾಮಾಜಿಕ ಲೆಕ್ಕಪರಿಶೋಧನೆಯಾಗಬೇಕು ಎಂದು ಹೇಳಿದರು.