ಬೆಂಗಳೂರು: ಕಳೆದೆರಡು ವಾರಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿಗಳು ನಮ್ಮಿಂದ ಸುದೀರ್ಘವಾದ ವರದಿಯನ್ನು ತೆಗೆದುಕೊಂಡಿದ್ದಾರೆ ಎಂದರು.
ಕೋವಿಡ್ ನಿಯಂತ್ರಣದ ಬಗ್ಗೆ ಪ್ರಧಾನಿಗಳು ನಮಗೆ ಕೆಲವು ನಿರ್ದೇಶನಗಳನ್ನು ಕೊಟ್ಟಿದ್ದಾರೆ. ನಾವು ರಾಜ್ಯದ ಸ್ಥಿತಿಗತಿ ಬಗ್ಗೆ ಹೇಳಿದ್ದೇವೆ. ಏಪ್ರಿಲ್ 9ರ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳವಾಗಿದೆ. ಹೀಗಾಗಿ, ಟೆಸ್ಟಿಂಗ್ ಜಾಸ್ತಿ ಮಾಡಲು ನಿರ್ಧಾರ ಮಾಡಿದ್ದೇವೆ. ಆಸ್ಪತ್ರೆಯ ವ್ಯವಸ್ಥೆಯ ಬಗೆಗೂ ಹೇಳಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ 50 ಸಾವಿರ ಬೆಡ್, ಖಾಸಗಿ ಆಸ್ಪತ್ರೆಯಲ್ಲಿ 1 ಲಕ್ಷ ಬೆಡ್ ವ್ಯವಸ್ಥೆ ಸೇರಿದಂತೆ 6-12 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಲಸಿಕೆಗೆ ಸೂಚಿಸಿದ್ದಾರೆ. ನಾವು ಸನ್ನದ್ಧರಾಗಿದ್ದೀವಿ ಅಂತ ಹೇಳಿದ್ದೀವಿ. 15-18 ವರ್ಷದ ಮಕ್ಕಳ ಲಸಿಕೆ ಚುರುಕಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಈಗ 6-12, 12-18 ನೇ ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ವೇಗ ಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಲಸಿಕಾಭಿಯಾನ ಉತ್ತಮವಾಗಿ ಮಾಡಿರುವುದರಿಂದ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅನವಶ್ಯಕ ನಿರ್ಬಂಧ ಹೇರದಂತೆ ಸೂಚಿಸಿರುವ ಪ್ರಧಾನಿ ಪೆಟ್ರೋಲ್, ಡೀಸೆಲ್ ಸೆಸ್ ಇಳಿಕೆ ಬಗ್ಗೆ ರಾಜ್ಯದ ಉದಾಹರಣೆ ಕೊಟ್ಟಿದ್ದಾರೆ. ಮತ್ತೆ ಸೆಸ್ ಇಳಿಸುವ ವಿಚಾರವಾಗಿ ಮಾತನಾಡಿರುವ ಅವರು, ಈಗ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡ್ಕೊಂಡು ಮುಂದುವರೆಯುತ್ತೇವೆ ಎಂದರು.
ಇದನ್ನೂ ಓದಿ:ಕೆಪಿಸಿಸಿ ನೂತನ ಪದಾಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ