ಕರ್ನಾಟಕ

karnataka

By

Published : Feb 24, 2023, 3:18 PM IST

Updated : Feb 24, 2023, 4:08 PM IST

ETV Bharat / state

ನಮ್ಮದು ಆರ್ಥಿಕ ಶಿಸ್ತು, ಆರ್ಥಿಕ ಪ್ರಗತಿಯ ಉಳಿತಾಯ ಬಜೆಟ್: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ವಿಚಾರವಾಗಿ ವಿಧಾನಸಭೆಯಲ್ಲಿಂದು ಸುದೀರ್ಘ ವಿವರಣೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು :ಬಂಡವಾಳ ವೆಚ್ಚಕ್ಕೆ ಸಾಲದ ಹಣ ವಿನಿಯೋಗಿಸಿಕೊಂಡಿದ್ದೇವೆ. ಮಿತಿಯೊಳಗೆ ಸಾಲ ಮಾಡಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದೇವೆ. ಕಳೆದ ಬಾರಿಯ ಬಜೆಟನ್ನು ಶೇ. 90 ರಷ್ಟು ಅನುಷ್ಠಾನ ಮಾಡಿದ್ದು, ಈ ಬಾರಿಯ ಬಜೆಟ್ ಅನ್ನೂ ಮುಂದೆ ನಾವೇ ಅಧಿಕಾರಕ್ಕೆ ಬಂದು ಅನುಷ್ಠಾನಕ್ಕೆ ತರುತ್ತೇವೆ ಎಂದು ಬಜೆಟ್ ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಟೀಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿರುಗೇಟು ಕೊಟ್ಟರು.

ಬಜೆಟ್ ಮೇಲೆ 14 ಜನ ಮಾತನಾಡಿದ್ದಾರೆ‌. ಹಲವಾರು ವಿಚಾರಗಳನ್ನು ಹೇಳಿದ್ದಾರೆ. ಕೆಲವು ಅನುಷ್ಠಾನದ ಬಗ್ಗೆ ಸಲಹೆ ಸೂಚನೆ ಕೊಟ್ಟಿದ್ದನ್ನು ಸ್ವಾಗತ ಮಾಡುತ್ತೇನೆ. ರಾಜ್ಯದ ಒಟ್ಟಾರೆ ಹಣಕಾಸು ಸ್ಥಿತಿ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳು, ರಾಜ್ಯದ ಆದ್ಯತೆ, ಆದಾಯ, ವೆಚ್ಚ, ಅಭಿವೃದ್ಧಿಗೆ ಎಷ್ಟು ವೆಚ್ಚ ಮಾಡಬಹುದು ಎನ್ನುವ ಎಲ್ಲ ವಿಚಾರ ಬಜೆಟ್‌ನಲ್ಲಿ ಮಂಡಿಸಿದ್ದೇವೆ ಎಂದು ವಿವರಿಸಿದರು.

ಆರ್ಥಿಕ ಶಿಸ್ತಿಗೆ ಕಾನೂನು: ಆರು ವಲಯದಲ್ಲಿ ಬಜೆಟ್ ವಿಂಗಡಿಸಿದ್ದೇವೆ. ಈ ಬಜೆಟ್ ಮಾಡುವ ಹಿನ್ನಲೆ ಅರ್ಥಮಾಡಿಕೊಳ್ಳಬೇಕು. ರಾಜ್ಯದ ಆರ್ಥಿಕತೆಗೆ ಚೌಕಟ್ಟು ಹಾಕಿಕೊಳ್ಳಬೇಕು, ಆರ್ಥಿಕ ಶಿಸ್ತು ಇರಲು ಕಾನೂನು ರಚಿಸಲಾಗಿದೆ. ಮಿತಿಯಲ್ಲಿ ತರಲು ಸಾಧ್ಯವಾದಾಗ ಉಳಿತಾಯ ಬಜೆಟ್, ಮೀರಿದಾಗ ಕೊರತೆ ಬಜೆಟ್ ಆಗಲಿದೆ. ಬಹಳಷ್ಟು ಬದಲಾವಣೆ ಆರ್ಥಿಕತೆಯಲ್ಲಿ ಆಗಿದೆ. ಅದಕ್ಕೆ ತಕ್ಕಂತೆ ನಾವು ಬಜೆಟ್ ಮಾರ್ಪಾಡು ಮಾಡಿದ್ದೇವೆ ಎಂದರು.

ಸಾಮಾಜಿಕ ಮೂಲಸೌಕರ್ಯ ವೆಚ್ಚ ಹೆಚ್ಚಾದರೆ ಆರ್ಥಿಕ ವೃದ್ಧಿಗೂ ವೆಚ್ಚ ಹೆಚ್ಚಳ ಆಗಲಿದೆ. ಎರಡನ್ನೂ ಹೊಂದಿಸುವುದು ಸವಾಲು. ಪ್ರತಿ ವರ್ಷ ಇದು ಹೆಚ್ಚಾಗುತ್ತಿದೆ. ಹಲವಾರು ಹೊಸ ಬೇಡಿಕೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ತಳ ಸಮುದಾಯಕ್ಕೆ ವೆಚ್ಚ ಮಾಡುವುದು ಖರ್ಚಲ್ಲ. ಅದು ಸದೃಢ ಆರೋಗ್ಯಕರ, ಶಿಕ್ಷಣ, ಪೂರಕ ಸಮಾಜ ನಿರ್ಮಾಣಕ್ಕೆ ಮಾಡುವ ಹೂಡಿಕೆಯಾಗಲಿದೆ.

20-25 ವರ್ಷದಲ್ಲಿ ಗುತ್ತಿಗೆ ಇದ್ದವರೆಲ್ಲ ಖಾಯಂ ಆಗುವ ಪ್ರಯತ್ನ ನಡೆಯುವ ವೇಳೆ ಕೋವಿಡ್ ಬಂತು. ಇದು ನಮ್ಮ ಬದುಕಿನ ಮೇಲೆ ದುಷ್ಪರಿಣಾಮ ಬೀರಿತು. ಆರೋಗ್ಯ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಬಂತು. ಇದರ ಜೊತೆ ಆರ್ಥಿಕವಾಗಿ ಬಹಳ ದೊಡ್ಡ ಪೆಟ್ಟು ಬಿತ್ತು. ಸರ್ಕಾರಕ್ಕೆ ಬರುವ ತೆರಿಗೆ ಆರ್ಥಿಕತೆಯ ಒಂದು ಭಾಗ ಮಾತ್ರ. ಒಟ್ಟಾರೆ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿತ್ತು. ಬೀದಿ ಬದಿ ವ್ಯಾಪಾರಿಯಿಂದ ದೊಡ್ಡ ಕಾರ್ಖಾನೆಯವರೆಗೂ ಅಭಿವೃದ್ಧಿ ಚಕ್ರ ನಿಂತು ಹೋಗಿತ್ತು. ಇದರಿಂದ ಸರ್ಕಾರಕ್ಕೆ ಬರುವ ತೆರಿಗೆ ತಪ್ಪಿದ್ದ ಒಂದು ಕಡೆಯಾದರೆ ದುಡಿಯುವವರ ಕೈಯಲ್ಲಿ ಹಣವಿಲ್ಲದಂತಾಗಿತ್ತು. ಇದು ಸಾಮಾಜಿಕ ಸಮಸ್ಯೆಯಾಗಿ ಪರಿವರ್ತನೆಯಾಯಿತು. ಆರೋಗ್ಯ ಕ್ಷೇತ್ರಕ್ಕೆ ಮಾಡಿಕೊಟ್ಟ ಅನುಕೂಲದ ಜೊತೆ ಸಮುದಾಯಕ್ಕೆ ಕೇಂದ್ರ, ರಾಜ್ಯ ಸರ್ಕಾರ ನೆರವು ನೀಡಿತು. ಇದಕ್ಕಾಗಿ ನಾವು ಸಾಲ ಮಾಡಲೇಬೇಕಾಯಿತು ಎಂದು ತಿಳಿಸಿದರು.

ಕೋವಿಡ್‌ ವೇಳೆ ಆದಾಯ ಕಡಿತ: ಕೋವಿಡ್ ವೇಳೆ ಒಂದು ವರ್ಷದಲ್ಲಿ ನಮಗೆ ಬರಬೇಕಿದ್ದ ಜಿಎಸ್​​ಟಿ ಪರಿಹಾರ 30 ಸಾವಿರ ಕೋಟಿ ರೂ. ನಮ್ಮ ಹೆಸರಿನಲ್ಲಿ ಕೇಂದ್ರ ಸಾಲ ತೆಗೆದು ನಮಗೆ ಕೊಟ್ಟರೂ, ಸಾಲ ಕೇಂದ್ರವೇ ತೀರಿಸಲಿದೆ. ಒಂದೇ ವರ್ಷದಲ್ಲಿ 20 ಸಾವಿರ ಕೋಟಿ ನಮಗೆ ಬರಬೇಕಾದ ಆದಾಯ ಕಡಿತವಾಯಿತು. ಬೇರೆ ರಾಜ್ಯಗಳು ಸರ್ಕಾರಿ ನೌಕರರ ವೇತನ ಸ್ಥಗಿತ, ವೇತನ ಕಡಿತ ಮಾಡಿದರು. ಆದರೆ ನಾವು ಅದನ್ನು ಮಾಡಲಿಲ್ಲ. ಕಷ್ಟ ಕೋವಿಡ್ ಕಾಲದಲ್ಲಿಯೂ ನಾವು ವೇತನ ಕೊಟ್ಟೆವು. ಲಾಕ್​ಡೌನ್​ನಲ್ಲಿ ಕೂಲಿಗೆ ಪರದಾಟ, ಗುಳೆ ಹೋಗುವ ಸ್ಥಿತಿ ಬಂದಿತ್ತು. ಸ್ವಾತಂತ್ರ್ಯ ನಂತರ ಮೊದಲ ಬಾರಿ ಇಂತಹ ಸ್ಥಿತಿ ಎದುರಾಯಿತು.

ಹಲವಾರು ದೇಶಗಳು ಆರ್ಥಿಕ ಚೇತರಿಕೆ ಕಂಡಿಲ್ಲ. ಬೆಲೆ ಏರಿಕೆ ಆರ್ಥಿಕ ಕುಸಿತ ಎದುರಿಸುತ್ತಿವೆ. ಆದರೆ, ಭಾರತ ಆರ್ಥಿಕ ಕುಸಿತದಿಂದ ಚೇತರಿಸಿಕೊಂಡಿದೆ. ಇದು ದೇಶದ ಅಂತರ್ಗತ ಶಕ್ತಿಗೆ ಕಾರಣ. ನಮ್ಮ ಸಂಸ್ಕೃತಿಯೂ ಕಾರಣ. ನೂರು ಡಾಲರ್ ಆದಾಯಕ್ಕೆ ಸಾವಿರ ಡಾಲರ್ ಖರ್ಚು ಮಾಡುತ್ತಾರೆ. ಆದರೆ ನಮ್ಮದು ಉಳಿತಾಯದ ಆರ್ಥಿಕತೆ. ನಾವು ಸಾವಿರ ಗಳಿಸಿದರೆ ನೂರು ರೂ ಉಳಿಸುವ ಆರ್ಥಿಕತೆ. ನಮ್ಮದು ಸೇವಿಂಗ್ ಎಕಾನಮಿ. ಬೇರೆ ದೇಶದ್ದು ವೆಚ್ಚದ ಆರ್ಥಿಕತೆ ಎಂದರು.

ನಾನು ಸಿಎಂ ಆದಾಗ ಕೋವಿಡ್ ವರ್ಷ ನಮ್ಮ ಆದಾಯ ಸಂಗ್ರಹ ನಿರೀಕ್ಷೆಗಿಂತ ಐದು ಸಾವಿರ ಕೋಟಿ ಹಿಂದಿತ್ತು. ನಮ್ಮ ಅಧಿಕಾರಿಗಳ ಸಹಕಾರದಿಂದ 13 ಸಾವಿರ ಅಧಿಕ ಸಂಗ್ರಹಕ್ಕೆ ಬಂದು ತಲುಪಿದ್ದೇವೆ. 72 ಸಾವಿರ ಕೋಟಿ ಸಾಲಕ್ಕೆ ಅನುಮತಿ ಪಡೆದು 68 ಸಾವಿರ ಕೋಟಿ ಮಾತ್ರ ಸಾಲ ಮಾಡಿದ್ದೇವೆ. ರಾಜ್ಯದ ಹಣಕಾಸು ಸ್ಥಿತಿ ಸರಿದಾರಿಗೆ ತಂದು ಉಳಿತಾಯ ಬಜೆಟ್ ಮಂಡಿಸಿದ್ದೇವೆ.

ನಾವು 2022-23 ರಲ್ಲಿ 14690 ಕೋಟಿ ಕೊರತೆ ಎಂದು ತೋರಿಸಿದ್ದೆವು. ಕೊರತೆ ಬಜೆಟ್ ಮಂಡಿಸಿದ್ದೆ. ಆದರೆ ಈಗ ಆ ಕೊರತೆ 5996 ಕ್ಕೆ ಇಳಿದಿದೆ. ಮಾರ್ಚ್ ಅಂತ್ಯಕ್ಕೆ ಅದು ಉಳಿತಾಯ ಬಜೆಟ್​ನತ್ತ ಪರಿವರ್ತನೆ ಸಾಧ್ಯತೆ ಇದೆ ಎಂದರು. ಕೇರಳ, ರಾಜಸ್ಥಾನ ವಿತ್ತೀಯ ಕೊರತೆ ಇತ್ತು. ಈ ಬಾರಿಯೂ ಅವರು ಕೊರತೆಯನ್ನೇ ತೋರಿಸುತ್ತಿವೆ. ಆದರೆ ನಾವು ಉಳಿತಾಯ ಬಜೆಟ್ ನತ್ತ ಬರುತ್ತಿದ್ದೇವೆ ಎಂದರು. 309182 ಕೋಟಿ ಬಜೆಟ್ ಮಂಡಿಸಿದ್ದೆ, ಕಳೆದ ಬಾರಿಗೆ ಹೋಲಿಸಿದರೆ ಶೇ.16 ಹೆಚ್ಚಾಗಿದೆ. ಪ್ರಥಮ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಬಜೆಟ್ ಗಾತ್ರ ಹೆಚ್ಚಿಸಿಯೂ ಉಳಿತಾಯ ಬಜೆಟ್ ಮಂಡಿಸಿದ್ದೇವೆ. ಕೋವಿಡ್ ಪೂರ್ವದ ಮಟ್ಟಕ್ಕೂ ಹೆಚ್ಚು ಗಾತ್ರದ ಬಜೆಟ್ ಮಾಡಿದ್ದೇವೆ ಎಂದರು.

ರಾಜ್ಯದ ಸಾಲ ಜಿಎಸ್​​ಡಿಪಿ ಮೇಲೆ ಅವಲಂಬನೆಯಾಗಿರಲಿದೆ. ಸಾಲ ಪಡೆಯುವ, ತೀರಿಸುವ ಮಿತಿ ನಿಗದಿಯಾಗಲಿದೆ. ಸಾಲ ಯಾವ ಕಾರಣಕ್ಕೆ ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯ, ಸಾಲ ಪಡೆದು ವೇತನ ಪಾವತಿ, ಸಾಲ ತೀರಿಸುವುದು ಮಾಡಿದರೆ ಆತಂಕಕಾರಿ. ಆದರೆ ಆಸ್ತಿ ನಿರ್ಮಾಣ ಮಾಡುವ, ಆರ್ಥಿಕತೆ ವೃದ್ದಿಗೆ ಬಳಸಿದರೆ ಸಾಲಕ್ಕೆ ಸಾರ್ಥಕತೆ ಬರಲಿದೆ. ನಾವು ಮಾಡಿರುವ ಸಾಲ ಬಂಡವಾಳ ವೆಚ್ಚಕ್ಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ನಾಲ್ಕು ವರ್ಷದಲ್ಲಿ ನಮಗೆ ಸಾಲ ಮಾಡಲು ಲಭ್ಯವಿದ್ದ ಪ್ರಮಾಣದಲ್ಲಿ ಶೇ.71 ರಷ್ಟು ಮಾತ್ರ ಸಾಲ ಮಾಡಿದ್ದೇವೆ. ಪ್ರತಿ ವರ್ಷ ಸಾಲ ಮಾಡುವ ಮಿತಿ ಕಡಿಮೆ ಮಾಡುತ್ತಿದ್ದೇವೆ. ಕೋವಿಡ್ ಇಲ್ಲದ ಕಾಲದಲ್ಲಿ ಮಾಡುವ ಸಾಲಕ್ಕೆ ಕೋವಿಡ್ ನಂತರದ ಸಾಲಕ್ಕೆ ಹೋಲಿಸಿದರೆ ನಾವು 71 ಪರ್ಸೆಂಟ್, ನಮ್ಮ ಹಿಂದಿದ್ದವರು 88.3 ಪರ್ಸೆಂಟ್ ಮಾಡಿದ್ದಾರೆ ಎಂದು ತಮ್ಮ ಸರ್ಕಾರದ ಸಾಲವನ್ನು ಸಮರ್ಥಿಸಿಕೊಂಡರು.

ಬೇರೆ ರಾಜ್ಯಕ್ಕೆ ಹೋಲಿಸಿದರೆ ಆರ್ಥಿಕ ಮಿತಿಯಲ್ಲಿ ಕಡಿಮೆಯಲ್ಲಿದ್ದೇವೆ. ಬರುವ ದಿನ ಇನ್ನಷ್ಟು ಕಡಿಮೆಯಾಗಲಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಯಲ್ಲಿ ಶೇ. 23.1 ಇದೆ. ನೆರೆ ರಾಜ್ಯಕ್ಕೆ ಹೋಲಿಸಿದರೆ ನಾವೇ ಕಡಿಮೆ ಸಾಲ ಮಾಡಿದ್ದೇವೆ. ಉಳಿದವರು ಅತಿ ಹೆಚ್ಚು ಸಾಲ ಮಾಡಿವೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಪ್ರತಿವರ್ಷ ಹೆಚ್ಚಿಸುತ್ತಾ ಬಂದಿದ್ದೇವೆ. ಕೇಂದ್ರ ಪ್ರಾಯೋಜಿತ ಅನುದಾನ ಕಡಿಮೆಯಾಗಿದೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ಯುಪಿಎ ಕಾಲದ ಜೊತೆ ಎನ್​ಡಿಎ ಮೊದಲ ಅವಧಿ, ಎರಡನೇ ಅವಧಿ ನೋಡಿದರೆ ನಮ್ಮ ಅವಧಿಯಲ್ಲೇ ಹೆಚ್ಚು ಅನುದಾನ ಬರುತ್ತಿದೆ ಎಂದು ಪ್ರತಿಪಕ್ಷದ ಆರೋಪ ತಳ್ಳಿಹಾಕಿದರು.

ಬಾಹ್ಯ ನೆರವಿನ ಯೋಜನೆಯಡಿ ಕಳೆದ ಐದು ವರ್ಷದಲ್ಲಿ 8605 ಕೋಟಿ ರೂ. ಆದಾಯ ದೊರೆತಿದೆ. ಕೇಂದ್ರ ಸರ್ಕಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿದೆ. ನೇರವಾಗಿ ಇಲಾಖೆ ಮತ್ತು ಫಲಾನುಭವಿಗಳ ಖಾತೆಗೆ ಬರಲಿದೆ. ಕೇಂದ್ರದಿಂದ 8 ಸಾವಿರ ಕೋಟಿ ನೇರ ಪಾವತಿ ಮಾಡಲಾಗಿದೆ.ನನ್ನ ಬಜೆಟ್ ಅನುಷ್ಠಾನ ಆಗಿಲ್ಲ ಎನ್ನುವ ಆರೋಪ ಮಾಡಿದ್ದಾರೆ.

398 ಘೋಷಣೆಯಲ್ಲಿ ಕೆಲವು ನೀತಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ತೆಗೆದರೆ 342 ಘೋಷಣೆ ಉಳಿಯಲಿದೆ. ಅದರಲ್ಲಿ 247 ಯೋಜನೆ ಉದ್ಘಾಟನೆ ಮಾಡಿದ್ದು, ಬಾಕಿ ಇರುವ ಯೋಜನೆ ಅನುಷ್ಠಾನ ಹಂತಕ್ಕೆ ಬಂದಿದೆ. ಡಿಸೆಂಬರ್ ಅಂತ್ಯ, ಜನವರಿ ಅಂತ್ಯಕ್ಕೆ ಶೇ. 40-50 ಅನುಷ್ಠಾನ ಆಗಿರುತ್ತೆ. ಆದರೆ ನಾವು 70 ಮುಟ್ಟಿದ್ದೇವೆ. ಶೇ.75 ರಷ್ಟು ಅನುದಾನ ವೆಚ್ಚ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಅದು ಶೇ.90 ದಾಟಲಿದೆ. ಮೊದಲ ಬಾರಿ ಈ ಗುರಿ ತಲುಪಲಿದೆ. ಬಜೆಟ್ ಸಮರ್ಥವಾಗಿ ಅನುಷ್ಠಾನಕ್ಕೆ ತಂದಿದ್ದೇನೆ ಎಂದರು.

ಕೋವಿಡ್ ಕಠಿಣ ಸ್ಥಿತಿಯಿಂದ ಹೊರಬಂದು ಆರ್ಥಿಕ ಸ್ಥಿತಿ ಸುಧಾರಣೆ ತರಲಾಗಿದೆ. ಎಲ್ಲಾ ರಂಗದಲ್ಲಿ ಅಮೃತ ಯೋಜನೆ ಮಾಡಿದ್ದೇವೆ. ರೈತಶಕ್ತಿ ಯೋಜನೆ ಅನುಷ್ಠಾನ ಆಗಿದೆ. ರೈತ ವಿದ್ಯಾನಿಧಿ ತಲುಪಿದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಸಂಜೀವಿನಿ ಯೋಜನೆ, ವಿವೇಕಾನಂದ ಯೋಜನೆ ಅನುಷ್ಠಾನ ಆಗಿದೆ. ಎಸ್ಸಿ ಎಸ್ಟಿ ಸಮುದಾಯ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಅವರ ಮೀಸಲಾತಿ ಹೆಚ್ಚಿಸಿದ್ದೇವೆ. ಒಬಿಸಿ ಹಾಸ್ಟೆಲ್ ಕೊರತೆ ಎನ್ನುವ ವರದಿ ಹಿನ್ನಲೆಯಲ್ಲಿ ಒಬಿಸಿಗೆ ಹಾಸ್ಟೆಲ್ ಹೆಚ್ಚಿಸುವ ಕೆಲಸ ಮಾಡಿದ್ದೇವೆ ಎಂದರು.

ಕೃಷಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಸಿರು ಕ್ರಾಂತಿ, ರೈತರ ಶ್ರಮದಿಂದ 130 ಕೋಟಿ ಜನರಿಗೆ ಆಹಾರ ಕೊಡುವ ಶಕ್ತಿಯಾಗಿ ಬೆಳೆದಿದ್ದೇವೆ, ಆದರೆ ಇಂದಿಗೂ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೃಷಿ ಅಭಿವೃದ್ಧಿ ಯೋಜನೆ ಮಾಡಿದರೆ ಸಾಲದು, ಶಿಕ್ಷಣ, ಆರೋಗ್ಯಕ್ಕೂ ಸಹಾಯ ಅಗತ್ಯ ಅದರ ಜೊತೆ ಶೂನ್ಯ ಬಡ್ಡಿಯ ಸಾಲದ ಮಿತಿ ಹೆಚ್ಚಿಸಿದ್ದೇವೆ. ಜೀವ ವಿಮೆ ಮಾಡಿದ್ದೇವೆ, ರೈತರ ಆವರ್ತ ನಿಧಿ ಹೆಚ್ಚಿಸಿದ್ದೇವೆ, ಕೃಷಿಕನ ಜೊತೆ ಕೃಷಿ ಕಾರ್ಮಿಕರ ಪರಿಸ್ಥಿತಿ ಇನ್ನೂ ಇದು ಸ್ಥಿತಿಯಲ್ಲಿದೆ.

ಇದನ್ನೂ ಓದಿ :ಚುನಾವಣಾ ಪ್ರಚಾರದ ಕಣಕ್ಕೆ ಧುಮುಕಿದ ಬಿಜೆಪಿ: ಪ್ರಗತಿ ರಥಯಾತ್ರೆಗೆ ಚಾಲನೆ

ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ಐತಿಹಾಸಿಕ ನಿರ್ಧಾರ:ಹಲವು ಸವಾಲುಗಳ ನಡುವೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು ಒಂದು ಐತಿಹಾಸಿಕ ನಿರ್ಧಾರ. ಬರುವ ದಿನಗಳಲ್ಲಿ ಇದರ ಲಾಭ ಆ ಸಮುದಾಯಕ್ಕೆ ಸಿಗಲಿದೆ. ಇದಕ್ಕಾಗಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮುಂದೊಂದು ದಿನ ಬೇರೆ ರಾಜ್ಯಗಳು ಇದನ್ನು ಅನುಕರಣೆ ಮಾಡಲಿವೆ ಎಂದು ಸಿಎಂ ಹೇಳಿದರು. 15ನೇ ವಿಧಾನಸಭೆಯ 5 ವರ್ಷ ಕಾಲಘಟ್ಟದಲ್ಲಿ ಎರಡು-ಮೂರು ವಿಚಾರಗಳನ್ನು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಗಿವೆ. ಈ ಐದು ವರ್ಷಗಳಲ್ಲಿ ನಾವು ಎಂದೂ ಕಾಣದ ದಿನಗಳನ್ನು ನೋಡಿದ್ದೇವೆ. ಕೋವಿಡ್ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದೆವು, ಸದನದಲ್ಲಿ ಗ್ಲಾಸ್ ಹಾಕಿ ಕಲಾಪ ನಡೆಸಲಾಯಿತು. ಇದು ಮರೆಯಲಾರದ ದಿನ ಎಂದು ನೆನಪಿಸಿದರು.

Last Updated : Feb 24, 2023, 4:08 PM IST

ABOUT THE AUTHOR

...view details