ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ಭ್ರಷ್ಟ ಸರ್ಕಾರ ಎಂದು ಸಿದ್ದರಾಮಯ್ಯ ಅವರ ಆಡಳಿತವನ್ನು ಮೂರು ಸಮೀಕ್ಷೆಗಳು ತಿಳಿಸಿವೆ. ಕಾಂಗ್ರೆಸ್ನಿಂದ ಟೆಂಡರ್ ಶ್ಯೂರ್ ರಸ್ತೆಗೆ ಅನುಮತಿ ನೀಡುವಾಗ ಶೇ 48ಕ್ಕೂ ಹೆಚ್ಚು ಭ್ರಷ್ಟಾಚಾರ ನಡೆದಿತ್ತು. ಇವರು ನಮ್ಮ ಸರ್ಕಾರದ 40 ಪರ್ಸೆಂಟ್ ಬಗ್ಗೆ ಮಾತನಾಡುತ್ತಾರೆ. ಇವರ ಕಾಲದಲ್ಲಿ ಏನಾಗಿದೆ ಎಂಬುದನ್ನು ರಾಜ್ಯ ನೋಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ವೇಳೆ ಮಾತನಾಡಿದ ಸಿಎಂ, ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡುವಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇದು ತೌಡು ಕುಟ್ಟುವ ಭಾಷಣ, 40 ಪರ್ಸೆಂಟ್ ಸರ್ಕಾರ ಎಂದಿದ್ದರು. ಈ ಸಂಬಂಧ ಇಂದು ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಆರೋಪ ಮಾಡಿದ ಗುತ್ತಿಗೆದಾರರು ದಾಖಲೆಗಳನ್ನು ಮತ್ತು ದೂರನ್ನು ಯಾಕೆ ಕೊಟ್ಟಿಲ್ಲ. ಇವರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ನಮ್ಮ 40 ಪರ್ಸೆಂಟ್ ನಿಂತು ಹೋಯಿತಲ್ಲ ಎಂಬ ಸಂಕಟದಿಂದ ಹೀಗೆಲ್ಲ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮಾತೇ ಒಂದು ದೊಡ್ಡ ಸುಳ್ಳು. ಕಾಂಗ್ರೆಸ್ ಅವಧಿಯಲ್ಲಿ ಗೋಲಿಬಾರ್ನಿಂದ ಅತೀ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಚುನಾವಣೆ ಬಂದಾಗ ರೈತರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಹಿಂದೆ ಬಹಳಷ್ಟು ನಾಯಕರು ತೌಡು ಕುಟ್ಟುವ ಕೆಲಸವನ್ನೇ ಮಾತ್ರ ಮಾಡಿದ್ದರು. ಅವರ ಅನುಭವದ ಮೇಲೆ ಪ್ರತಿಪಕ್ಷ ನಾಯಕರು ಹೇಳಿದ್ದಾರೆ. ನಾವು ಜನತೆಗೆ ಒಳ್ಳೆಯದನ್ನು ಮಾಡುವ ಕೆಲಸ ಮಾಡಿದ್ದೇವೆ ಎಂದು ಸಿಎಂ ಸಮರ್ಥಿಸಿಕೊಂಡರು.
ಕೋವಿಡ್ ಸಮಯದಲ್ಲಿ ನಾವು ಜನರಿಗೆ ಪೂರಕ ಕಾರ್ಯಕ್ರಮ ಮಾಡಿದ್ದೇವೆ. ಈ ಬಾರಿ ನಾವು ಉಳಿತಾಯ ಬಜೆಟ್ ಕೊಟ್ಟಿದ್ದೇವೆ. ಪ್ರಣಾಳಿಕೆಯನ್ನು ಯಾವ್ಯಾವ ಸರ್ಕಾರ ಹೇಗೆ ಜಾರಿ ಮಾಡಿತ್ತು ಎನ್ನುವುದು ಗೊತ್ತಿದೆ. ಒಟ್ಟಾರೆ ನಮ್ಮ ಪ್ರಣಾಳಿಕೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಕ್ರಮ ಕೈಗೊಂಡಿದ್ದೇವೆ. ಪ್ರತಿಪಕ್ಷ ನಾಯಕರು ರಾಜ್ಯಪಾಲರ ಭಾಷಣದ ಮೇಲೆ ಅವರು ಮಾತಾಡಲಿಲ್ಲ. ಕೇವಲ ಟೀಕೆ ಮಾಡುವುದನ್ನು ಅವರು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಮ್ಮನೆ ಆರೋಪ ಮಾಡುವುದಲ್ಲ, ತನಿಖೆಗೆ ಸಿದ್ಧ: ಸರ್ಕಾರದ ಮೇಲೆ ಸುಮ್ಮನೆ ಆರೋಪ ಮಾಡುವುದಲ್ಲ. ಯಾವುದೇ ದಾಖಲೆ ಇದ್ದರೆ ನೇರವಾಗಿ ಸರ್ಕಾರದ ಬಳಿಗೆ ಬನ್ನಿ. ತನಿಖೆ ಮಾಡಲು ನಾವು ಸದಾ ಸಿದ್ಧ ಇದ್ದೇವೆ ಎಂದು ಸದನದಲ್ಲಿ ಸವಾಲು ಹಾಕಿದರು.
ತಪ್ಪು ಹುಡುಕುವ ಕೆಲಸ ಬೇಡ: ಉತ್ತಮ ಉದ್ದೇಶ ಇಟ್ಟುಕೊಂಡು ನಾವು ಮೀಸಲಾತಿ ಏರಿಕೆ ಮಾಡಿದ್ದೇವೆ. ನ್ಯಾ. ನಾಗಮೋಹನ್ ದಾಸ್ ವರದಿ ಬಂದರೂ ಒಂದೂವರೆ ವರ್ಷ ಏನೂ ಆಗಿರಲಿಲ್ಲ. ನಾವು ಬದ್ಧತೆಯಿಂದ ಮೀಸಲಾತಿ ಏರಿಕೆ ಮಾಡಿದ್ದೇವೆ. ಸಾಮಾಜಿಕ ನ್ಯಾಯ ಕೇವಲ ಭಾಷಣ ಆಗಬಾರದು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ನಿಲ್ಲಬೇಕಿತ್ತು. ಅದನ್ನು ಬಿಟ್ಟು ತಪ್ಪು ಹುಡುಕುವ ಕೆಲಸ ಮಾಡಬಾರದು. ನಮ್ಮದು ಬದ್ಧತೆಯಿಂದ ಕೆಲಸ ಮಾಡುವ ಸರ್ಕಾರ. ನಮಗೆ ಜನಬೆಂಬಲ ಸಿಗುವ ವಿಶ್ವಾಸವಿದೆ. ಹಿಂದೆಯೂ ನಮಗೆ ಬೆಂಬಲ ಸಿಕ್ಕಿದೆ. ಮುಂದೆಯೂ ನಮಗೆ ಬೆಂಬಲ ಸಿಗಲಿದೆ ಅನ್ನೋ ವಿಶ್ವಾಸವಿದೆ ಎಂದರು.
ಈ ವೇಳೆ ಕಾಂಗ್ರೆಸ್ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಅಕ್ರಮ ನಡೆದಿತ್ತು ಎಂದು ಮುಖ್ಯಮಂತ್ರಿಗಳು ಹೇಳಿದಾಗ, ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಅಂತ ಸಿಎಂ ಮೇಲೆ ಕಾಂಗ್ರೆಸ್ ಸದಸ್ಯರು ಕೂಗಾಡಿದರು.
ತನಿಖೆಯಾಗದ ಎಲ್ಲಾ ಕೇಸ್ಗಳನ್ನು ಲೋಕಾಯುಕ್ತ ವಹಿಸುತ್ತೇವೆ: ಮುಂದುವರೆದು ಮಾತನಾಡಿದ ಸಿಎಂ, ಕಾಂಗ್ರೆಸ್ ಅವಧಿಯಲ್ಲಿ ಎಸಿಬಿಯಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಅದನ್ನು ತನಿಖೆ ಮಾಡಲು ಅಂದಿನ ಸರ್ಕಾರ ಮುಂದಾಗಲಿಲ್ಲ. ಸಚಿವರು, ಮುಖ್ಯಮಂತ್ರಿಗಳ ಮೇಲೆ ದೂರುಗಳು ದಾಖಲಾಗಿದ್ದವು. ಎಸಿಬಿಯನ್ನು ರಚನೆ ಮಾಡಿ ಲೋಕಾಯುಕ್ತವನ್ನು ಮುಚ್ಚಿದರು. ತನಿಖೆಯಾಗದ ಎಲ್ಲಾ ಕೇಸ್ಗಳನ್ನು ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಿದರು.
ನಮ್ಮ ಮೇಲೆ ನಿಖರವಾದ ಮಾಹಿತಿ ಇದ್ದರೆ ಲೋಕಾಯುಕ್ತರಿಗೆ ನೀಡಿ. ಸುಮ್ಮನೆ ಬೀದಿಯಲ್ಲಿ ನಿಂತು ಆರೋಪ ಮಾಡೋದಲ್ಲ. ನೀವು ಏನೇ ಹೇಳಿದ್ರೂ ಜನ ಮರುಳಾಗಲ್ಲ ಎಂದು ತಿರುಗೇಟು ನೀಡಿದರು. ನೀರಾವರಿ ಇಲಾಖೆಯ ಟೆಂಡರ್ ನಲ್ಲಿ ಪಾರದರ್ಶಕತೆ ತಂದಿದ್ದೇವೆ. ಟೆಂಡರ್ ನಲ್ಲಿ ಭ್ರಷ್ಟಾಚಾರ ಆಗದಂತೆ ನೋಡಿಕೊಂಡಿದ್ದೇವೆ. ಮೂರು ಹಂತದಲ್ಲಿ ಟೆಂಡರ್ ಪರಿಶೀಲನಾ ಕ್ರಮ ಕೈಗೊಂಡಿದ್ದೇವೆ ಎಂದರು.
ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ನಕಲಿ ದಾಖಲೆ ಇಟ್ಟುಕೊಂಡು ಟೆಂಡರ್ಗೆ ಮುಂದಾಗಿದ್ದಾರೆ. ಭಜಂತ್ರಿ ಎಂಬಾತ ಇಂತಹದೊಂದು ಕೆಲಸ ಮಾಡುತ್ತಿದ್ದಾನೆ. ಸಚಿವರು, ಶಾಸಕರ ನಕಲಿ ಲೆಟರ್ ಇಟ್ಟುಕೊಂಡು ಟೆಂಡರ್ ನಲ್ಲಿ ಭಾಗವಹಿಸುತ್ತಿದ್ದಾನೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ದಾಖಲೆ ತಂದು ಕೊಟ್ಟರೆ ಸೂಕ್ತ ಕ್ರಮವಾಗಲಿದೆ ಎಂದು ಸ್ಪೀಕರ್ ಹೇಳಿದರು.
ಇದನ್ನೂ ಓದಿ: ಸೈಬರ್ ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ