ಬೆಂಗಳೂರು :ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ (chief ministers Conference) ರಾಜ್ಯಗಳು ಸೌಹಾರ್ದಯುತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಒಮ್ಮತ ಮೂಡಿಸುವ ಪ್ರಯತ್ನ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ನೆಹರೂ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಬಳಿಯ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ( union home minister Amith sha) ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ಅಂತರ್ರಾಜ್ಯದ ಮಹತ್ವದ ವಿಚಾರಗಳು ಚರ್ಚೆ ಆಗಲಿವೆ. ಸೌಹಾರ್ದತೆಯಿಂದ ಅಭಿವೃದ್ಧಿ ಕೆಲಸಗಳನ್ನು ಯಾವ ರೀತಿ ಮಾಡಬಹುದು. ಆ ನಿಟ್ಟಿನಲ್ಲಿ ಒಮ್ಮತ ಮೂಡಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಸಮ್ಮೇಳನದ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿರುವುದು.. ತಮಿಳುನಾಡಿನ ಪಾಲಾರ್ ಪ್ರದೇಶದ ವಿಚಾರಗಳು ನ್ಯಾಯಾಧೀಕರಣ, ಕೋರ್ಟ್‌ನಲ್ಲಿರುವುದರಿಂದ ಬಹುತೇಕ ಚರ್ಚೆಗೆ ಬರುವುದು ಅನುಮಾನ ಎಂದ್ರು. ಉಳಿದಂತೆ ಸಣ್ಣ ನೀರಾವರಿ, ರೈಲ್ವೆ ವಿಚಾರ, ಮೂಲಸೌಕರ್ಯಗಳ ಬಗ್ಗೆ ನದಿಗಳ ಬಗ್ಗೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ ಎಂದರು.
ಜವಾಹರಲಾಲ್ ನೆಹರೂಗೆ ನಮನ :ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ(Jawaharlal Nehru ) ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ ಇರುವ ಪ್ರತಿಮೆಗೆ ಸಿಎಂ ಬೊಮ್ಮಾಯಿ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಸ್ವಾತಂತ್ರ್ಯದ ನಂತರ ದೇಶವನ್ನು ಕಟ್ಟುವಲ್ಲಿ ಜವಾಹರ್ಲಾಲ್ ನೆಹರೂ ಅವರ ಪಾತ್ರ ಹಿರಿದು. ಮೊದಲನೇ ಪ್ರಧಾನಮಂತ್ರಿಯಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಭಾರತ ಸ್ವಾತಂತ್ರ್ಯದ ನಂತರದ ತನ್ನ ಗುರಿಗಳನ್ನು ಮುಟ್ಟಲು ಭದ್ರ ಅಡಿಪಾಯ ಹಾಕಿದ ಒಬ್ಬ ಶ್ರೇಷ್ಠ ನಾಯಕ ಎಂದು ಶ್ಲಾಘಿಸಿದರು.
ವಿಶೇಷವಾಗಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿಯೂ ಅವರ ಪಾತ್ರ ಮಹತ್ವದ್ದು ಎಂದರು. ಮಕ್ಕಳ ಮೇಲಿನ ಅವರ ವಿಶೇಷ ಪ್ರೀತಿಯಿಂದಾಗಿ 'ಚಾಚಾ ನೆಹರೂ' ಎಂಬ ಬಿರಿದು ಬಂದಿದೆ. ಅವರ ಹೆಸರಿನ ಹಲವಾರು ಸಂಸ್ಥೆಗಳು ಭಾರತದ ಉನ್ನತೀಕರಣಕ್ಕೆ ಕಾರಣವಾಗಿದೆ.
ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದು ಗಮನಾರ್ಹ ಎಂದರು. ಅವರಿಗೆ ನಮನ ಸಲ್ಲಿಸುವ ಮೂಲಕ ಮತ್ತೊಮ್ಮೆ ದೇಶ ಕಟ್ಟುವ ಕಾರ್ಯಕ್ಕೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.