ಬೆಂಗಳೂರು :ಡಿಸೆಂಬರ್ನಲ್ಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎನ್ನುವ ಚಿಂತನೆ ಸರ್ಕಾರಕ್ಕೆ ಇಲ್ಲ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಸರ್ವೋನ್ನತ ನ್ಯಾಯಾಲಯದ ಆದೇಶದಂತೆ ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಬಿಎಂಪಿ ಚುನಾವಣೆ ಅದರ ಪಾಡಿಗೆ ಅದು ಬರಲಿದೆ. ಡಿಸೆಂಬರ್ನಲ್ಲೇ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನುವುದು ನಿರಾಧಾರ, ಅಂತಹ ಸಿದ್ಧತೆಯಲ್ಲಿ ಸರ್ಕಾರ ತೊಡಗಿಲ್ಲ. ಸುಪ್ರೀಂಕೋರ್ಟ್ ಆದೇಶ ಬಂದ ನಂತರ ಚುನಾವಣೆ ಮಾಡುತ್ತೇವೆ. ಊಹಾಪೋಹದ ಯಾವುದೇ ಚರ್ಚೆಗೆ ನಾನು ಉತ್ತರ ಕೊಡಲ್ಲ ಎಂದರು.
ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಮಳೆ ಬಂದಿರುವುದರಿಂದ ಸ್ವಲ್ಪ ತಡವಾಗಿದೆ. ಈಗಾಗಲೇ ಸಂಪೂರ್ಣವಾಗಿ ಎಲ್ಲಾ ಕ್ಷೇತ್ರದಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಿದೆ. ಒಂದು ವಾರ, ಹತ್ತು ದಿನ ಸಮಯ ಕೊಟ್ಟಿದ್ದೇನೆ. ನಂತರ ನಾನೇ ಕೆಲವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.
ನಾನು ಮುಖ್ಯಮಂತ್ರಿ ಆದ ದಿನವೇ ನವೆಂಬರ್ 1ರಂದು ಆಡಳಿತ ಸುಧಾರಣೆಯ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಡಳಿತ ಸುಧಾರಣಾ ವರದಿ ಬಂದ ನಂತರ ಅದನ್ನು ಅನುಸರಿಸುವುದರಲ್ಲಿ 'ಜನಸೇವಕ' ಒಂದಾಗಿ ಅದನ್ನು ಇಂದು ಅನುಷ್ಠಾನ ಮಾಡುತ್ತಿದ್ದೇವೆ.