ಬೆಂಗಳೂರು: ಚರಂಡಿ, ಒಳಚರಂಡಿ, ರಾಜಕಾಲುವೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಲಿದ್ದೇವೆ. ಮುಂದಿನ ಮೂರು ನಾಲ್ಕು ವರ್ಷ ಬಜೆಟ್ನಲ್ಲಿ ಅನುದಾನ ಇಟ್ಟು ಕೆಲಸ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68 ರ ಅಡಿ ನಡೆದ ಚರ್ಚೆಗೆ ಸರ್ಕಾರದಿಂದ ಉತ್ತರ ಕೊಡುವ ವೇಳೆ ಮಾತನಾಡಿದ ಅವರು, ಬೆಂಗಳೂರು ನಗರ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಾಗಾಗಿ ಮೊದಲಿನ ರಾಜಕಾಲುವೆ ಸ್ವರೂಪ ಈಗ ಬದಲಾಗಿದೆ. ರಾಜಕಾಲುವೆ ಮೇಲಿನ ಒತ್ತಡ ಹೆಚ್ಚಾಗಿದೆ. ರಾಜಕಾಲುವೆಗೆ ಒಳಚರಂಡಿ ನೀರು ಹೋಗುತ್ತಿದೆ. ಬೆಂಗಳೂರಿನ ಎಲ್ಲ ಕೆರೆ ತುಂಬಿವೆ. ಇಲ್ಲಿನ ಬಹುತೇಕ ಕೆರೆಗಳಿಗೆ ಸೀವೇಜ್ ಗೇಟ್ ಇಲ್ಲ. ಹಲಸೂರು, ಸ್ಯಾಂಕಿಕೆರೆ ವ್ಯವಸ್ಥಿತವಾಗಿರುವ ಕಾರಣ ನೆರೆ ಬರಲ್ಲ. ಆದರೆ, ಇತರ ಕಡೆ ಆ ರೀತಿ ಇಲ್ಲ ಎಂದರು.
ಒತ್ತುವರಿ ತೆರವು ಮಾಡಿ ಕಾಲುವೆಗಳ ಮೂಲ ಸ್ವರೂಪಕ್ಕೆ ತರಬೇಕು. ಕೆರೆಗಳಿಗೆ ಸೀವೇಜ್ ಗೇಟ್ ಹಾಕಬೇಕು. ರಾಜಕಾಲುವೆ ಸಂಪೂರ್ಣ ಮಾಡಬೇಕು. ಹೊಸ ಕಾಲುವೆಗಳನ್ನೂ ಮಾಡಬೇಕು. ಬಿಬಿಎಂಪಿ, ಬಿಡಿಎ, ಬಿಎಂಆರ್ ನಂತರ ಗ್ರಾಮ ಪಂಚಾಯತ್ ಬರಲಿದೆ. ನೀರು ದಕ್ಷಿಣ ಪಿನಾಕಿನಿಗೆ ಹೋಗಿ ಕಾವೇರಿ ತಲುಪುವವರೆಗೂ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ 1617 ಕೋಟಿ ಹಣ ರಾಜಕಾಲುವೆಗೆ ಕೊಡಲಾಗಿದೆ. ಮತ್ತೆ ಮೊನ್ನೆ 300 ಕೋಟಿ ಬಿಡುಗಡೆ ಮಾಡಲಾಗಿದೆ. 130 ಕಿ ಮೀ ರಾಜಕಾಲುವೆ ಮಾಡುತ್ತಿದ್ದೇವೆ. ಆದ್ಯತೆ ಮೇಲೆ ರಾಜಕಾಲುವೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.