ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳನ್ನು ಬದಲಾಯಿಸಿದರೂ ಇತ್ತಿಚೆಗೆ ನಿಧನರಾದ ಸಚಿವರಾಗಿದ್ದ ಉಮೇಶ್ ಕತ್ತಿ ಅವರು, ಅದರಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಅವರೊಬ್ಬ ವರ್ಣರಂಜಿತ ರಾಜಕಾರಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಡಿಸಿದ ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಕ್ಕರೆ, ಲೋಕೋಪಯೋಗಿ ಬಂಧಿಖಾನೆ, ಕೃಷಿ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಯಾವುದೇ ಪಕ್ಷದಲ್ಲಿದ್ದರೂ ಸ್ನೇಹಕ್ಕೆ ಕೊರತೆ ಇರಲಿಲ್ಲ. ಎಲ್ಲರನ್ನೂ ಹಾಸ್ಯಮಯದಿಂದಲೇ ಮಾತನಾಡಿಸುತ್ತಿದ್ದರು. ಹೀಗಾಗಿ ಅವರೊಬ್ಬ ವರ್ಣರಂಜಿತ ರಾಜಕಾರಣಿ ಎಂದು ಹೇಳಿದರು.
ತಮಗೆ ರಾಜಕೀಯ ಜನ್ಮ ನೀಡಿದ ಹುಕ್ಕೇರಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿದ್ದು ಸಾಮಾನ್ಯ ಮಾತಲ್ಲ. ಇಂದು ಒಮ್ಮೆ ಪಕ್ಷ ಬದಲಿಸಿದರೆ, ಮತದಾರರಿಗೆ ಯಾವ ಗುರುತಿಗೆ ಮತ ಹಾಕಬೇಕು ಎಂಬ ಗೊಂದಲವಾಗುತ್ತದೆ. ಕತ್ತಿ ಅವರು ಎಷ್ಟೇ ಪಕ್ಷ ಬದಲಿಸಿದರೂ ಮತದಾರರು ಮಾತ್ರ ಅವರ ಕೈ ಬಿಡಲಿಲ್ಲ. ಇದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.
ಗೋದಿ- ಜೋಳ ವಿತರಣೆ ಮಾಡುವ ಪ್ರಸ್ತಾವ:ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ನಂತರ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಜತೆ ರಾಗಿ, ಗೋಧಿ, ಜೋಳವನ್ನು ವಿತರಣೆ ಮಾಡಬೇಕು ಎಂಬ ಪ್ರಸ್ತಾವ ಇಟ್ಟಿದ್ದರು. ಇದಕ್ಕೆ ನಾವು ಸಮ್ಮತಿಯನ್ನು ಕೊಟ್ಟಿದ್ದೇವೆ. ಹುಕ್ಕೇರಿಯಲ್ಲಿ ವಿದ್ಯುತ್ ವಿತರಣಾ ಘಟಕವನ್ನು ಪ್ರಾರಂಭಿಸಿದ್ದರು. ಮಹಾರಾಷ್ಟ್ರ ಮತ್ತು ಗುಜರಾತ್ ಹೊರತುಪಡಿಸಿದರೆ, ಇದನ್ನು ಮೊದಲು ಪ್ರಾರಂಭಿಸಿದ್ದು, ಕತ್ತಿ ಅವರು. ಕ್ಷೇತ್ರದ ಜನತೆಗೆ ನಿರ್ಧಿಷ್ಟ ದರದಲ್ಲಿ ವಿದ್ಯುತ್ ವಿತರಣೆ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.