ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಅನುಮಾನ ಬಂದ ಕೂಡಲೇ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದು, ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಅವರು(ಕಾಂಗ್ರೆಸ್) ಅಧಿಕಾರದಲ್ಲಿದ್ದಿದ್ದರೆ ಈ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಆರ್.ಟಿ.ನಗರದ ತಮ್ಮ ಖಾಸಗಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಪ್ರಕರಣದಲ್ಲಿ ಗೃಹಸಚಿವರ ರಾಜೀನಾಮೆಗೆ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಆದರೆ ಅವರ ಕಾಲದಲ್ಲೂ ಪಿಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹಿರಿಯ ಅಧಿಕಾರಿ ಆರೋಪಿಯಾಗಿದ್ದರು. ಆದರೆ ಆಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಡಿಕೆಶಿ ಆರೋಪಕ್ಕೆ ಟಾಂಗ್ ನೀಡಿ, ವ್ಯವಸ್ಥೆ ಸ್ವಚ್ಛ ಮಾಡಲು ಮುಂದಾಗಿದ್ದೇವೆ. ಗೃಹ ಸಚಿವರ ದಕ್ಷತೆ, ಪ್ರಾಮಾಣಿಕತೆಯಿಂದಲೇ ಹಲವರ ಬಂಧನವಾಗಿದೆ ಎಂದು ಹೇಳಿದ ಸಿಎಂ, ಆರಗ ಜ್ಞಾನೇಂದ್ರ ಬೆಂಬಲಕ್ಕೆ ನಿಂತರು.
'ಕಾಂಗ್ರೆಸ್ ಪ್ರಕರಣ ಮುಚ್ಚಿ ಹಾಕುತ್ತಿತ್ತು': ನಾವು ನಮ್ಮ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಇದ್ದಿದ್ದರೆ ಸಿಸ್ಟಮ್ಯಾಟಿಕ್ ಆಗಿ ಪ್ರಕರಣ ಮುಚ್ಚಿ ಹಾಕುತ್ತಿತ್ತು. ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಗೃಹ ಸಚಿವರು ಎಫ್ಎಸ್ಎಲ್ ವರದಿ ತರಿಸಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಸಿಐಡಿಗೆ ಕೊಡಿ ಎಂದು ನಾನು ಆದೇಶಿಸಿದ್ದೆ. ಪ್ರಕರಣದಲ್ಲಿ ಬಂಧಿಸಿರುವ 50 ಆರೋಪಿಗಳಲ್ಲಿ 20 ಪೊಲೀಸ್ ಅಧಿಕಾರಿಗಳಿದ್ದಾರೆ ಎಂದು ಹೇಳಿದರು.
ಜಮೀರ್ ಬೆಂಬಲಿಗರ ಪ್ರತಿಭಟನೆಗೆ ಸಿಎಂ ಗರಂ: ಶಾಸಕ ಜಮೀರ್ ಅಹ್ಮದ್ ನಿವಾಸ, ಕಚೇರಿ ಮೇಲಿನ ಎಸಿಬಿ ದಾಳಿ ವಿಚಾರ ಕುರಿತು ಪ್ರತಿಕ್ರಿಯೆ ನೀಡುವ ವೇಳೆ ಶಾಸಕ ಜಮೀರ್ ಬೆಂಬಲಿಗರ ಪ್ರತಿಭಟನೆಗೆ ಸಿಎಂ ಸಿಟ್ಟಾದರು. ಎಸಿಬಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಮಾಡುತ್ತಿರುವುದರ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿದೆ. ಪೆಂಡಿಂಗ್ ಕೇಸ್ಗಳ ಸಂಬಂಧ ದಾಳಿ, ವಿಚಾರಣೆಗಳು ನಡೆಯುತ್ತಿದೆ. ಆದರೆ ಇದಕ್ಕೆ ಅಡ್ಡಿಪಡಿಸಿ ಎಸಿಬಿ ದಾಳಿ ಸಂದರ್ಭದಲ್ಲಿ ಪ್ರತಿಭಟನೆ ಮಾಡಿಸಲಾಗುತ್ತಿದೆ. ಇದು ರಾಜಕೀಯಪ್ರೇರಿತ ಪ್ರತಿಭಟನೆ ಎಂದರು.
ಹೈಕೋರ್ಟ್ ಛೀಮಾರಿ ಹಾಕಿತು ಅಂತ ಎಸಿಬಿ ದಾಳಿ ನಡೆದಿಲ್ಲ. ದಾಖಲೆ ಆಧರಿಸಿ ಕ್ರಮ ತಗೊಂಡಿದ್ದಾರೆ. ಇದು ನಿರಂತರವಾಗಿ ನಡೆಯುತ್ತದೆ ಎಂದು ನಿನ್ನೆ ನಡೆದ ಐಎಎಸ್ ಅಧಿಕಾರಿ ಬಂಧನ ಕುರಿತು ಸ್ಪಷ್ಟೀಕರಣ ನೀಡಿದರು. ಸಿಐಡಿ ಮತ್ತು ಎಸಿಬಿ ಕಾರ್ಯ ಚಟುವಟಿಕೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.