ಬೆಂಗಳೂರು: ಮಂಡಿ ನೋವಿನಿಂದಾಗಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೆಗೌಡರ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಪದ್ಮನಾಭನಗರದ ಗೌಡರ ನಿವಾಸಕ್ಕೆ ತೆರಳಿದ ಸಿಎಂಗೆ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಆರ್.ಅಶೋಕ್, ಭೈರತಿ ಬಸವರಾಜ್, ಕೆ.ಗೋಪಾಲಯ್ಯ, ವಿ.ಸೋಮಣ್ಣ, ಮುನಿರತ್ನ ಅವರು ಸಾಥ್ ನೀಡಿದರು.
ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿದ ಸಿಎಂ, ದೇವೇಗೌಡರ ಯೋಗಕ್ಷೇಮ ವಿಚಾರಿಸಿ ಕೆಲಹೊತ್ತು ಮಾತುಕತೆ ನಡೆಸಿದರು. ಆಗ ದೇವೇಗೌಡರು, ಎಲ್ಲಾ ಊಟ ಮಾಡಿಕೊಂಡು ಹೋಗಿ ಎಂದು ಹೇಳಿದರು. ಆಗ ಸಿಎಂ ನಮ್ಮದು ಊಟ ಆಗಿದೆ ಎಂದರು. ಆರೋಗ್ಯ ವಿಚಾರಣೆ ವೇಳೆ ಸಿಎಂ, ನೀವು ಊಟ ಎಲ್ಲಾ ಮಾಡ್ತೀರಾ?, ಮುದ್ದೆ ಎಲ್ಲಾ ಊಟ ಮಾಡ್ತೀರಾ ಎಂದು ಕೇಳಿದರು. ಆಗ ಗೌಡರು, ಹೌದು ಎಂದು ತಲೆ ಅಲ್ಲಾಡಿಸಿದರು.
ದೇವೆಗೌಡರ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರು ಕಾಲು ನೋವಿನ ಬಗ್ಗೆ ಸಿಎಂ ಕೇಳಿದಾಗ, ಹೌದು, ಕಾಲು ನೋವು ಇದೆ. ಹಾಗೆಯೇ ಮಂಡಿ ನೋವು ಸಹ ಇದೆ ಎಂದ ದೇವೇಗೌಡರು, ಊಟ ಮಾಡಿಕೊಂಡು ಹೋಗಿ ಎಂದು ಮನವಿ ಮಾಡಿಕೊಂಡರು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸಹೋದ್ಯೋಗಿಗಳು ಮುದ್ದೆ ಊಟ ಮಾಡಿ ತೆರಳಿದರು.
ಮಂಗಳವಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮೊನ್ನೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಆರ್. ಅಶೋಕ್ ಅವರು ದೇವೆಗೌಡರನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿ ತೆರಳಿದ್ದರು.
ಪೋಸ್ಟರ್ ಹಾಕಿದವರ ವಿರುದ್ಧ ಕೇಸ್: ದೇವೇಗೌಡರನ್ನು ಭೇಟಿ ಮಾಡಿ ವಾಪಸ್ಸಾಗುವ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಪೇ ಸಿಎಂ ಪೋಸ್ಟರ್ ಹಾಕಿದವರ ವಿರುದ್ಧ ಕೇಸ್ ದಾಖಲು ಮಾಡಲು ಹೇಳಿದ್ದೇನೆ. ಇದು ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಮಾಡಿಸಿದ ವ್ಯವಸ್ಥಿತ ಷಡ್ಯಂತ್ರ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಆಧಾರರಹಿತವಾಗಿ ಕ್ಯಾಂಪೇನ್ ಮಾಡಲಾಗುತ್ತಿದೆ. ಇದೆಲ್ಲ ಸ್ಯೂಡೋ ಕ್ಯಾಂಪೇನ್ಗಳು. ಇದರ ಬಗ್ಗೆ ಜನಕ್ಕೆ ಏನೂ ಗೊತ್ತಾಗಲ್ಲ. ಈ ರೀತಿ ಮಾಡುವುದಕ್ಕೆ ಎಲ್ಲರಿಗೂ ಬರುತ್ತದೆ, ಇತ್ತೀಚೆಗೆ ಇದು ಅತಿ ಹೆಚ್ಚಾಗಿದೆ. ಇದಕ್ಕೆ ಯಾವುದೇ ಬೆಲೆ ಇಲ್ಲ. ನನಗಿಂತಲೂ ರಾಜ್ಯದ ಹೆಸರು ಕೆಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದರು.
ದೇವೇಗೌಡರ ಆರೋಗ್ಯ ವಿಚಾರಿಸಿದ ಸಿಎಂ ಲವಲವಿಕೆಯಿಂದ ಮಾತನಾಡಿದ ಗೌಡರು: ನಾನು ಮತ್ತು ನನ್ನ ಸಂಪುಟದ ಸಚಿವರು. ಯಾಜಮಾನರನ್ನು (ದೇವೇಗೌಡರು) ಭೇಟಿ ಮಾಡಲು ಬಂದಿದ್ದೆವು. ಅವರ ಆರೋಗ್ಯ ವಿಚಾರಿಸಲು ಬಂದಿದ್ದು, ಸಾಕಷ್ಟು ಸುಧಾರಣೆ ಆಗಿದೆ. ಬಹಳ ಅತ್ಮಿಯವಾಗಿ ಲವಲವಿಕೆಯಿಂದ ಮಾತನಾಡಿದರು. ಅವರ ಅನುಭವವನ್ನು ಹಂಚಿಕೊಂಡರು. ಹಳೆಯ ವಿಚಾರವೆಲ್ಲ ಚರ್ಚೆ ಆಯ್ತು. ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಹಳೆ ವಿಚಾರವೆಲ್ಲ ಮೆಲುಕು ಹಾಕಿದರು ಎಂದು ಸಿಎಂ ಹೇಳಿದರು
ರಾಜ್ಯಕ್ಕೆ ಒಳ್ಳೆಯದನ್ನು ಏನು ಮಾಡಬೇಕು ಅನ್ನುವುದೆಲ್ಲವನ್ನೂ ಅವರು ಮಾತನಾಡಿದರು. ಅವರ ಆರೋಗ್ಯ ಚೆನ್ನಾಗಿ ಇರಲಿ. ನೂರು ಕಾಲ ಬಾಳಲಿ, ರಾಜ್ಯಕ್ಕೆ ಅವರ ಮಾರ್ಗದರ್ಶನ ಸಿಗಲಿ ಎಂದು ಸಿಎಂ ಹಾರೈಸಿದರು.
ಇದನ್ನೂ ಓದಿ:ದೇವೇಗೌಡರನ್ನು ಭೇಟಿಯಾದ ಸಿದ್ದರಾಮಯ್ಯ; ಆರು ವರ್ಷದ ಬಳಿಕ ಗುರು ಶಿಷ್ಯರ ಸಮಾಗಮ