ಬೆಂಗಳೂರು: ಚುನಾವಣೆ ಬಂತು ಎಂದು ಈಗ ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಉಚಿತ ಯೋಜನೆಗಳ ಭರವಸೆ ಕೊಡುತ್ತಿದ್ದಾರೆ. ಅದಕ್ಕೆ ಏನಾದರೂ ಹಣ ಇಟ್ಟಿದ್ದಾರಾ? ನಿಮ್ಮನ್ನು ಯಾಮಾರಿಸುವ ಕೆಲಸ ನಡೆಯುತ್ತಿದೆ. ಉಚಿತ ಯೋಜನೆಗಳಿಗೆ ವರ್ಷಕ್ಕೆ 24 ಸಾವಿರ ಕೋಟಿ ಬೇಕು. ಯಾವುದಾದರೂ ಬ್ಯಾಂಕ್ನಲ್ಲಿ ಹಣ ಇಟ್ಟಿದ್ದಾರಾ? ನಿಮಗೆ ಭಿಕ್ಷೆ ಬೇಕಿಲ್ಲ, ಅವಕಾಶ ಬೇಕು. ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ, ನಾವು ಸ್ತ್ರೀ ಸಾಮರ್ಥ್ಯ ಯೋಜನೆ ಘೋಷಿಸಿದ್ದೆವು. ಅದರಂತೆ ಜಾರಿಗೆ ತಂದಿದ್ದೇವೆ ಎಂದು ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ ಪ್ರಚಾರದ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಸ್ತ್ರೀ ಸಾಮರ್ಥ್ಯ- ನಮೋ ಸ್ತ್ರೀ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದು, ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆಯಡಿ 10 ಸಾವಿರ ಸ್ವ ಸಹಾಯ ಗುಂಪುಗಳಿಗೆ ತಲಾ 1 ಲಕ್ಷದಂತೆ 100 ಕೋಟಿ ವಿಶೇಷ ಬಂಡವಾಳ ನಿಧಿ ವಿತರಣೆಗೆ ಸಿಎಂ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷದವರು ಈಗ ಉಚಿತ ಯೋಜನೆಗಳ ಹೆಸರಿನಲ್ಲಿ ಗ್ಯಾರಂಟಿ ಕಾರ್ಡ್ ಕೊಡ್ತಾರೆ? ಇದು ಯಾಕೆ? ಅದರಿಂದ ಏನಾಗುತ್ತದೆ. ಇದರ ಹಿಂದೆ ಏನಾದರೂ ಹಣ ಇಟ್ಟಿದ್ದಾರಾ? ನಿಮಗೆ ಭಿಕ್ಷೆ ಬೇಕಿಲ್ಲ, ಅವಕಾಶ ಬೇಕು. ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ. ವರ್ಷಕ್ಕೆ 24 ಸಾವಿರ ಕೋಟಿ ದುಡ್ಡು ಬೇಕು. ಇದು ಕೊಡಲು ಸಾಧ್ಯನಾ? ಬ್ಯಾಂಕ್ನಲ್ಲಿ ದುಡ್ಡು ಇಟ್ಟು ಕಾರ್ಡ್ ಕೊಡಲಿ ಬೇಕಾದರೆ ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಘೋಷಣೆಯನ್ನ ಟೀಕಿಸಿದರು. ನಮ್ಮ ಹಣೆಬರಹ ನಾವೇ ಬರೆದುಕೊಳ್ಳಬೇಕು. ಓದುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ಪಾಸ್ ಕೊಡುತ್ತಿದ್ದೇವೆ. ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಪಾಸ್ ಕೊಡುತ್ತಿದ್ದೇವೆ. ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಿ. ನಿಮ್ಮ ಬದುಕಿನಲ್ಲಿ ಬೆಳಕು ಬರಲಿದೆ. ಇಂತಹ ಕಾರ್ಯಕ್ರಮ ನಮ್ಮ ಸರ್ಕಾರ ಮಾಡುತ್ತದೆ ಸಿಎಂ ಹೇಳಿದರು.
ಸ್ತ್ರೀ ಸಂಘದಿಂದ ಜಿಡಿಪಿಗೆ ನೆರವು : ನನಗೆ ಇವತ್ತು ಬಹಳಷ್ಟು ಸಂತೋಷವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಗೆ ಚಾಲನೆ ಕೊಟ್ಟಿರೋದಕ್ಕೆ ಸಂತೋಷವಾಗುತ್ತಿದೆ. ಪ್ರತಿವಾರ ಡಿಬಿಟಿ ಮೂಲಕ ಹಣ ಸಂದಾಯವಾಗಲಿದೆ. ಬ್ಯಾಂಕ್ನಿಂದ ಪಡೆದ ಹಣವನ್ನ ಮಹಿಳೆಯರು ಸ್ವಯಂ ಉದ್ಯೋಗಕ್ಕೆ ವಿನಿಯೋಗಿಸಿ ಸ್ವಾವಲಂಬನೆಯಾಗಿ ಸ್ವತಂತ್ರವಾಗಿ ಉದ್ಯೋಗ ಮಾಡಬೇಕು. ಈ ಯೋಜನೆಯಿಂದ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬನೆಯಾಗಿ ಬದುಕಬಹುದು. 50 ಸಾವಿರ ಸ್ತ್ರೀ ಸಂಘಕ್ಕೆ 500 ಕೋಟಿ ಹಣ ಮೀಸಲಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸ್ತ್ರೀ ಸಂಘದಿಂದ ಜಿಡಿಪಿಗೆ ನೆರವು ನಿರೀಕ್ಷಿಸಲಾಗಿದೆ ಎಂದರು.
ಮಹಿಳೆಯರ ದುಡಿಮೆಯಿಂದ ರಾಜ್ಯಕ್ಕೂ ಆದಾಯವಿದೆ. ನಿಮ್ಮಗಳ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಸರ್ಕಾರಕ್ಕಿಂತ ರಾಜ್ಯದ ಜನರು ಶ್ರೀಮಂತವಾಗಬೇಕು. ನಿಮ್ಮ ದುಡಿಮೆಯ ಶ್ರಮ ಸರ್ಕಾರದ ಬಂಡವಾಳ ಸೇರಿದರೆ ದೊಡ್ಡ ಉತ್ಪಾದನೆಯಾಗಲಿದೆ. ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದನೆ ಇಲ್ಲೇ ಮಾಡಬೇಕು. ಇದರಿಂದ ಬಡಮಕ್ಕಳಿಗೆ ಸಹಾಯವಾಗಲಿದೆ. ಒಂದುಕಡೆ ಆರೋಗ್ಯದ ದೃಷ್ಟಿಯಿಂದ ಇನ್ನೊಂದು ಕಡೆ ಸ್ಥಳೀಯ ಉತ್ಪಾದನೆಗೆ ಒತ್ತು ನೀಡಿದಂತಾಗಲಿದೆ. ಗುಣಮಟ್ಟದ ಉತ್ಪಾದನೆ ಮಾಡಿ ಬ್ರ್ಯಾಂಡ್ ಮಾಡಿ ಎಂದು ಕರೆ ನೀಡಿದರು.