ಬೆಂಗಳೂರು: ಸಾಮಾನ್ಯವಾಗಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ನಡೆಯುತ್ತವೆ. ಆದರೆ, ಇಂದು ಮಾತ್ರ ಅಜ್ಞಾತ ಸ್ಥಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಪೂರ್ವಭಾವಿ ಸಭೆ ನಡೆಸಿ ಅಚ್ಚರಿ ಮೂಡಿಸಿದರು. ಫೆಬ್ರವರಿ 17 ರಂದು ರಾಜ್ಯ ಮುಂಗಡ ಬಜೆಟ್ ಮಂಡನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಆಯ-ವ್ಯಯ ಮಂಡನೆ ಮಾಡಲಿದ್ದಾರೆ. ಈಗಾಗಲೇ ಬಜೆಟ್ ಸಿದ್ದತಾ ಸಭೆಗಳನ್ನು ಆರಂಭಿಸಿರುವ ಮುಖ್ಯಮಂತ್ರಿಗಳು ಶಕ್ತಿ ಭವನದಲ್ಲಿ ಇಲಾಖಾವಾರು ಬೇಡಿಕೆ, ಯೋಜನೆಗಳ ಕುರಿತು ಮಾಹಿತಿ ಪಡೆದು ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇಂದು ಬೆಳಗ್ಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಬಜೆಟ್ ಪೂರ್ವಭಾವಿ ಸಭೆಗೆ ಸಮಯ ಕಾಯ್ದಿರಿಸಲಾಗಿತ್ತು. ಅದರಂತೆ ಶಕ್ತಿಭವನದಲ್ಲಿ ಸಭೆ ನಡೆಯಬೇಕಿತ್ತು. ಆದರೆ ಮುಖ್ಯಮಂತ್ರಿಗಳು ವಿಧಾನಸೌಧದಿಂದ ಶಕ್ತಿಸೌಧಕ್ಕೆ ಆಗಮಿಸುವ ಬದಲು ಅಜ್ಞಾತ ಸ್ಥಳಕ್ಕೆ ತೆರಳಿದರು. ಅಜ್ಞಾತ ಸ್ಥಳದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಮೂರು ಗಂಟೆಗಳ ಕಾಲ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಅಜ್ಞಾತ ಸ್ಥಳದಲ್ಲಿ ಸಭೆ ನಡೆಸುವ ಉದ್ದೇಶ ಇದ್ದ ಕಾರಣದಿಂದಾಗಿಯೇ ಬಜೆಟ್ ಪೂರ್ವಭಾವಿ ಸಭೆಯ ಸ್ಥಳವನ್ನು ಖಾಲಿ ಬಿಡಲಾಗಿತ್ತು. ಅದರಂತೆ ಅಜ್ಞಾತ ಸ್ಥಳದಲ್ಲಿ ಸಭೆಗೆ ಸಿದ್ಧತೆ ಮೊದಲೇ ಮಾಡಿಕೊಂಡು ಅಲ್ಲಿ ಸಭೆ ನಡೆಸಲಾಯಿತು ಎನ್ನಲಾಗ್ತಿದೆ.
ಸರ್ಕಾರಿ ಕಾರ್ಯಕ್ರಮಗಳು, ಪಕ್ಷದ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದಂತೆ ಭಾಗಿಯಾಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಪೂರ್ವ ಸಿದ್ದತೆ ಸಭೆಯನ್ನೂ ನಡೆಸಬೇಕಿದೆ. ಸತತವಾಗಿ ಕೇಂದ್ರದ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೆ ರಾಜ್ಯಕ್ಕೆ ಭೇಟಿ ನೀಡುತ್ತಿರುವುದೂ ಬಜೆಟ್ ಸಿದ್ಧತೆಗೆ ಹೆಚ್ಚಿನ ಸಮಯ ಸಿಗದಂತಾಗಿದೆ. ಹಾಗಾಗಿ ಸಮಯದ ಅಭಾವದ ಕಾರಣದಿಂದಾಗಿ ಸಭೆಗಳು ನಡೆಯುವಾಗ ಗಣ್ಯರು ಭೇಟಿಗೆ ಆಗಮಿಸಿ ಸಮಯ ವ್ಯಯವಾಗುವುದನ್ನು ತಪ್ಪಿಸಲು ಸಿಎಂ ಅಜ್ಞಾತ ಸ್ಥಳದಲ್ಲಿ ಸಭೆ ನಡೆಸಿದರು ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಲಿದೆ: ಸಿಎಂ ಬೊಮ್ಮಾಯಿ