ಬೆಂಗಳೂರು:ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಹಿನ್ನೆಲೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರೀಡಂ ಪಾರ್ಕ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಣಯವನ್ನು ಸ್ವಾಗತಿಸಬೇಕೋ ಅಥವಾ ತಿರಸ್ಕರಿಸಬೇಕು ಎಂಬುದರ ಬಗ್ಗೆ ನಾಳೆ ನಿರ್ಧಾರ ಪ್ರಕಟಿಸುವುದು ಎಂದರು.
''ನಾಳೆ ಪ್ರೀಡಂಪಾರ್ಕ್ನಲ್ಲಿ ತುರ್ತು ಕಾರ್ಯಕಾರಿಣಿ ಸಭೆ ನಡೆಯಲಿದೆ. ಮೀಸಲಾತಿ ಕುರಿತು ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಬಗ್ಗೆ ನಾಳೆ ಬೆಳಿಗ್ಗೆ ಸಮುದಾಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಬಂಡೆಪ್ಪ ಕಾಶಂಪೂರ್, ಬಸವರಾಜ ಪಾಟೀಲ ಯತ್ನಾಳ್ ಸೇರಿದಂತೆ ಸಮುದಾಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಸಭೆಯ ನಂತರ, ಸರ್ಕಾರದ ನಿರ್ಣಯವನ್ನು ಸ್ವಾಗತಿಸಬೇಕೋ ಅಥವಾ ತಿರಸ್ಕರಿಸಬೇಕು ಎಂಬುದರ ಬಗ್ಗೆ ನಾಳೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಇದಕ್ಕೂ ಮುನ್ನ ಸಂಭ್ರಮವಾಗಲಿ ಅಥವಾ ತಿರಸ್ಕೃತ ಭಾವನೆ ಬೇಡ'' ಎಂದು ಅವರು ಹೇಳಿದರು.
''ಶಿಕ್ಷಣ ಹಾಗೂ ಉದ್ಯೋಗ ಹೆಚ್ಚಳ ಉದ್ದೇಶದಿಂದ ಕಳೆದ ಎರಡೂ ವರ್ಷಗಳಿಂದ ಸತತವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಕಳೆದ 70 ದಿನಗಳಿಂದ ಪ್ರೀಡಂಪಾರ್ಕ್ ನಲ್ಲಿ ಧರಣಿ ನಡೆಸಿದ್ದೇವೆ. ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ 3ಬಿ ಪ್ರವರ್ಗದಲ್ಲಿದ್ದ ಲಿಂಗಾಯಿತ ಸಮುದಾಯವನ್ನು ಹೊಸದಾಗಿ 2ಡಿ ವರ್ಗಕ್ಕೆ ಸೇರಿಸಿ ಶೇ.5 ರಷ್ಟು ಮೀಸಲಾತಿ ನೀಡಿತ್ತು. ಅಲ್ಲದೇ ಇದಕ್ಕೆ ಕಾನೂನು ತೊಡಕಾಗಿ ನಿನ್ನೆಯಷ್ಟೇ ಕೋರ್ಟ್ ಆದೇಶದಿಂದ ತೆರವುಗೊಂಡಿತ್ತು.
ನಾವು ಮೊದಲಿನಿಂದಲೂ ಪಂಚಮಸಾಲಿ ಸಮುದಾಯವನ್ನ 2ಎ ಪ್ರವರ್ಗಕ್ಕೆ ನೀಡಿ 15 ರಷ್ಟು ಮೀಸಲಾತಿ ನೀಡಲು ಒತ್ತಾಯ ಮಾಡಿದ್ದೇವು. ಇದೀಗ 5 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿ ಸರ್ಕಾರ ನಿರ್ಣಯ ಕೈಗೊಂಡಿದೆ. ಶೇ 2ರಷ್ಟು ಮೀಸಲಾತಿ ಹೆಚ್ಚಳದಿಂದ ಸಮುದಾಯಕ್ಕೆ ಯಾವ ರೀತಿ ಉಪಯೋಗಕ್ಕೆ ಬರಲಿದೆ ಎಂಬುದರ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ಸರ್ಕಾರದ ನಿರ್ಣಯ ಬಗ್ಗೆ ಚರ್ಚೆ ನಡೆಸಿ ನಾಳೆ ತೀರ್ಮಾನ ಕೈಗೊಳ್ಳಲಾಗುವುದು. ಆದೇಶ ಪ್ರತಿ ಬಂದ ಬಳಿಕ ಚರ್ಚೆ ಮಾಡಿ ನಮ್ಮ ನಿಲುವು ಪ್ರಕಟಿಸಲಾಗುವುದು'' ಎಂದರು.
ಮೀಸಲಾತಿ ಬಗ್ಗೆ ಸಿಎಂ ಹೇಳಿದ್ದೇನು?:ಮೀಸಲಾತಿ ಹೆಚ್ಚಳ ಮತ್ತು ಮರು ಹೊಂದಾಣಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮಹತ್ವದ ತೀರ್ಮಾನವನ್ನು ರಾಜ್ಯ ಬಿಜೆಪಿ ಸರ್ಕಾರ ತೆಗೆದುಕೊಂಡಿದೆ. ಎಸ್ಸಿ ಸಮುದಾಯಕ್ಕೆ ಒಳಮೀಸಲಾತಿಯನ್ನು ನೀಡುವ ದಿಟ್ಟ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಇದರ ಜೊತೆಗೆ ಮುಸ್ಲಿಮ್ ಸಮುದಾಯದ ಶೇ 4 ರಷ್ಟು ಓಬಿಸಿ ಮೀಸಲಾತಿಯನ್ನು ರದ್ದುಪಡಿಸಲಾಗಿದೆ. ವೀರಶೈವ ಲಿಂಗಾಯತರಿಗೆ 2ಡಿ ಕೆಟೆಗರಿಯಲ್ಲಿ ಶೇ 7ರಷ್ಟು ಮೀಸಲಾತಿಯನ್ನು ನೀಡುವ ಹಾಗೂ ಒಕ್ಕಲಿಗ ಸಮುದಾಯ ಮತ್ತು ಇತರರಿಗೆ 2ಸಿ ಕೆಟೆಗರಿಯಲ್ಲಿ ಶೇ 6 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ.