ಕರ್ನಾಟಕ

karnataka

ETV Bharat / state

ಪತ್ರಕರ್ತ ಗುರುಲಿಂಗಸ್ವಾಮಿ ವಿಧಿವಶ.. ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ಸಿಎಂ

ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ನಿಧನಕ್ಕೆ ಸಿಎಂ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಹೊಳಿಮಠ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.

ಗುರುಲಿಂಗಸ್ವಾಮಿ ಹೊಳಿಮಠ ಪಾರ್ಥೀವ ಶರೀರದ ಮುಂದೆ ಸಿಎಂ ಕಣ್ಣೀರು
ಗುರುಲಿಂಗಸ್ವಾಮಿ ಹೊಳಿಮಠ ಪಾರ್ಥೀವ ಶರೀರದ ಮುಂದೆ ಸಿಎಂ ಕಣ್ಣೀರು

By

Published : Aug 22, 2022, 3:18 PM IST

Updated : Aug 22, 2022, 3:28 PM IST

ಬೆಂಗಳೂರು: ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೋಳಿಮಠ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಂಬನಿ ಮಿಡಿದಿದ್ದು, ಪಾರ್ಥಿವ ಶರೀರದ ದರ್ಶನದ ವೇಳೆ ಕಣ್ಣೀರು ಹಾಕಿದರು.

ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟ ಸಿಎಂ

ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ಇಂದು ದೈವಾಧೀನರಾಗಿದ್ದು, ಅವರ ನಾಗರಬಾವಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಅಂತಿಮ ದರ್ಶನ ಪಡೆದರು. ಸಿಎಂಗೆ ಸಚಿವ ಮುನಿರತ್ನ, ಗೋಪಾಲಯ್ಯ, ಮುರುಗೇಶ್ ನಿರಾಣಿ ಸಾಥ್​ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗುರುಲಿಂಗಸ್ವಾಮಿ ನನ್ನ ಯುವ ಸ್ನೇಹಿತ. ಅವರ ಅಕಾಲಿಕ ಮರಣ ದುಃಖ ತಂದಿದೆ. ನನಗೆ ಅವರು 20 ವರ್ಷದಿಂದ ಪರಿಚಯ. ರಾಮದುರ್ಗದ ಹಳ್ಳಿಯವರು. ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮದಲ್ಲಿ ಕೆಲಸ ಪಡೆದುಕೊಂಡಿದ್ದರು. ಪತ್ರಿಕಾ ದಿನದ ಆರಂಭದ ದಿನದಿಂದ ನನಗೆ ಪರಿಚಯ. ಟಿ.ವಿ ಮಾಧ್ಯಮದಲ್ಲೂ ಕೆಲಸ ಮಾಡಿದ್ದರು.

ಅತ್ಯಂತ ಕ್ರಿಯಾಶೀಲ ಪತ್ರಕರ್ತ. ವರದಿಯ ನಿಖರತೆ ಪಡೆದುಕೊಂಡು ಮುಂದುವರೆಯುವ ಜವಾಬ್ದಾರಿಯುತ ಪತ್ರಕರ್ತ. ಅವನೊಬ್ಬನೇ ಬೆಳೆಯಲಿಲ್ಲ, ತನ್ನ ಜೊತೆ ಇತರರನ್ನೂ ಬೆಳೆಸಿದ್ದ. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಗೃಹ ಸಚಿವರಾಗಿದ್ದಾಗಿನಿಂದ ನನ್ನ ಜೊತೆ ಇದ್ದ. ಪ್ರತೀ ದಿನ ಹಲವರಿಗೆ ಸಹಾಯ ಮಾಡುತ್ತಿದ್ದ. ಸಿಎಂ ಫಂಡ್ ಫೈಲಿಗೆ ಸಹಿ ಹಾಕಿಸಿ ಸಹಾಯ ಮಾಡ್ತಿದ್ದ. ಕ್ರಿಯಾಶೀಲವಾಗಿದ್ದ ಎಂದು ಆತ್ಮೀಯತೆ ನೆನೆದರು.

ರಾಮದುರ್ಗದಲ್ಲಿ ಅಂತ್ಯಸಂಸ್ಕಾರ:ನಿನ್ನೆ ರಾತ್ರಿ ಎಂಟು ಗಂಟೆಗೆ ಮನೆಗೆ ಹೋಗ್ತೀನಿ ಅಂದ. ಬೆಳಗ್ಗೆ ಎದ್ದು ಇಂತಹ ಸುದ್ದಿ ಬರುತ್ತೆ ಅಂತ ಅನಿಸಿರಲಿಲ್ಲ. ಇದು ದುಃಖಕರ ಸಂಗತಿ. ನಾಗರಾಜ್ ಜಮಖಂಡಿ ಜೊತೆ ಜೊತೆಯಲ್ಲೇ ಇವನು ಹೋದ. ಪ್ರತೀ ವರ್ಷ ಜಮಖಂಡಿ ಅವರ ಕಾರ್ಯಕ್ರಮ ಇವನೇ ನಿಂತು ಮಾಡುತ್ತಿದ್ದ. ಅವನ ಕ್ರಿಯಾಶೀಲ ಇತರರಿಗೂ ಮಾದರಿಯಾಗಲಿ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಗುರುಲಿಂಗಸ್ವಾಮಿ ಅವರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟೂರು ರಾಮದುರ್ಗದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುವುದು.

ಹೆಚ್. ಡಿ ಕುಮಾರಸ್ವಾಮಿ ಕಂಬನಿ:ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೋಳಿಮಠ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.

ಅಕಾಲಿಕ ನಿಧನ ನನಗೆ ಅತೀವ ದುಃಖ ಉಂಟು ಮಾಡಿದೆ. ಅತ್ಯಂತ ಕ್ರಿಯಾಶೀಲರಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದ ಅವರು, ಸರಳತೆ ಸಜ್ಜನಿಕೆಯ ವ್ಯಕ್ತಿತ್ವದವರು ಹಾಗೂ ಅತ್ಯುತ್ತಮ ಪತ್ರಕರ್ತರಾಗಿದ್ದರು. ಗುರುಲಿಂಗಸ್ವಾಮಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಸಂತಾಪ :ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್​ನ ಹಲವು ನಾಯಕರು ಗುರುಲಿಂಗಸ್ವಾಮಿ ಹೊಳಿಮಠ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ, ‘ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ ಗುರುಲಿಂಗಸ್ವಾಮಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರು, ಸ್ನೇಹಿತರು, ಬಂಧುಗಳಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.

ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ, ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾಗಿದ್ದ ಆತ್ಮೀಯ ಪತ್ರಕರ್ತ ಗುರುಲಿಂಗಸ್ವಾಮಿ ಹೋಳಿಮಠ ಅವರ ಅನಿರೀಕ್ಷಿತ ನಿಧನದಿಂದ ಆಘಾತಗೊಂಡಿದ್ದೇನೆ. ಒಂದೆರಡು ಬಾರಿ ನನ್ನನ್ನು ಸಂದರ್ಶಿಸಿದ್ದ ಗುರುಲಿಂಗ ಸ್ವಾಮಿಯವರ ವಿನಯವಂತಿಕೆ ನನಗೆ ಇಷ್ಟವಾಗಿತ್ತು. ಇವರ ಕುಟುಂಬದ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದಾರೆ.

ಮನಸ್ಸಿಗೆ ಅತೀವ ದುಃಖವಾಯಿತು:ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಟ್ವೀಟ್ ನಲ್ಲಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಜೊತೆಗೆ ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಆತ್ಮಕ್ಕೆ ಶಾಂತಿ ದೊರೆಯಲಿ:ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಟ್ವೀಟ್ ಮಾಡಿದ್ದು, ಹಿರಿಯ ಪತ್ರಕರ್ತರು, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೋಳಿಮಠ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಓದಿ:ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ನಿಧನ

Last Updated : Aug 22, 2022, 3:28 PM IST

ABOUT THE AUTHOR

...view details