ಬೆಂಗಳೂರು :ರಾಷ್ಟ್ರೀಯ ಶಿಕ್ಷಣ ನೀತಿಯಡಿ ರೂಪಿಸಲಾಗುವ ಪಠ್ಯಕ್ರಮ, ಬೋಧನಾ ವಿಧಾನಗಳನ್ನು ವಿದ್ಯಾರ್ಥಿ ಕೇಂದ್ರಿತವಾಗಿ ರೂಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿಕ್ಷಣ ಇಲಾಖೆಗೆ ಸಲಹೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ರೂಪಿಸಲಾದ ಕಾರ್ಯಪಡೆಯ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಮುಗ್ಧತೆ ಮತ್ತು ಕುತೂಹಲಗಳೆಂಬ ಪರಸ್ಪರ ವಿರುದ್ಧ ಗುಣಗಳನ್ನು ಮಕ್ಕಳು ಹೊಂದಿರುತ್ತಾರೆ. ಇದು ಪ್ರಾಯಕ್ಕೆ ಬರುವವರೆಗೂ ಮಕ್ಕಳಲ್ಲಿ ಇರುತ್ತದೆ. ಇದಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮಗೆ ಶಿಕ್ಷಣದ ಬಗ್ಗೆ, ಮಕ್ಕಳ ಬಗ್ಗೆ ಚಿಂತನೆ ನಡೆಸಲು ಅವಕಾಶ ದೊರೆತಿದೆ. ಇದರಡಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ಇಲಾಖೆ ಮತ್ತು ಟಾಸ್ಕ್ ಫೋರ್ಸ್ ಕರ್ನಾಟಕದ ಭವಿಷ್ಯವನ್ನು ಬರೆಯುತ್ತಿವೆ ಎಂಬುದನ್ನು ಮನದಟ್ಟು ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು. ಕಲಿಕೆ ಸುಲಲಿತವಾಗಿ ಆಗಬೇಕು. ಮಕ್ಕಳು ಆಟವಾಡುತ್ತ ಕಲಿಯಬೇಕು. ಎಳೆಯ ವಯಸ್ಸಿನಲ್ಲಿ ಮಕ್ಕಳ ಗ್ರಹಣ ಶಕ್ತಿ ಅತಿ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ನಾವು ಅವರ ಮೇಲೆ ಮಾಹಿತಿಯ ಹೊರೆ ಹೊರಿಸದೆ ಉತ್ತಮ ಆಲೋಚನಾ ವಿಧಾನವನ್ನು ಕಲಿಸಿ ಕೊಡಬೇಕು ಎಂದು ತಿಳಿಸಿದರು.