ಕರ್ನಾಟಕ

karnataka

ETV Bharat / state

ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಸೇರಿ ಹಲವು ಬೇಡಿಕೆಗಳ ಈಡೇರಿಕೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ - ಸಿಎಂ ಬಸವರಾಜ ಬೊಮ್ಮಾಯಿ

ಹಿಂದೂ ಸಮಾಜ ಸುರಕ್ಷಿತವಾಗಿದ್ದರೆ ಅದಕ್ಕೆ ಮೂಲ ಕಾರಣ ಕ್ಷತ್ರೀಯ ಸಮಾಜ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣನೆ

ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕ್ಷತ್ರೀಯ ಸಮಾವೇಶ
ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕ್ಷತ್ರೀಯ ಸಮಾವೇಶ

By

Published : Jan 29, 2023, 4:11 PM IST

ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು

ಬೆಂಗಳೂರು: ಕ್ಷತ್ರೀಯ ಸಮಾಜದ ಜನರು ತಮ್ಮ ತಮ್ಮ ಕುಲಕಸುಬುಗಳ ಜೊತೆಗೆ ಬೇರೆ ವೃತ್ತಿಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದು, ಪ್ರತ್ಯೇಕ ನಿಗಮ, ಅನುದಾನ ಸೇರಿದಂತೆ ಕ್ಷತ್ರೀಯ ಸಮುದಾಯದ ಬೇಡಿಕೆಗಳನ್ನು ನಮ್ಮ ಸರ್ಕಾರ ಪರಿಗಣಿಸಲಿದೆ ಎಂದು ಭರವಸೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕ್ಷತ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷತ್ರೀಯರು ಇಲ್ಲದೇ ಇದ್ದರೆ ಭಾರತದಲ್ಲಿ ಇಂದು ಭಾರತೀಯರ ಒಕ್ಕೂಟ, ಒಗ್ಗಟ್ಟು ಇಲ್ಲದಂತಾಗುತ್ತಿತ್ತು. ವಿಶೇಷವಾಗಿ ನಮ್ಮ ಭಾರತದಲ್ಲಿರುವ ಹಿಂದೂ ಸಮಾಜ ರಕ್ಷಿತವಾಗಿದ್ದರೆ ಅದಕ್ಕೆ ಮೂಲ ಕಾರಣ ಕ್ಷತ್ರೀಯ ಸಮಾಜ. ಈ ಸಮಾವೇಶ ಸಮಾಜವನ್ನು ಒಗ್ಗೂಡಿಸುವ ಸಮಾವೇಶವಾಗಿದೆ.

ಸ್ವಾಭಿಮಾನದ ಬದುಕು ಸಾಗಿಸುತ್ತಿವೆ: 38 ಪಂಗಡ ಒಂದುಗೂಡಿ ನಿಮ್ಮ ಹಕ್ಕು ಕೇಳಲು ಸೇರಿದ್ದೀರಿ. ಹಾಗಾಗಿ ಕ್ಷತ್ರೀಯ ಮೇಳ ಆಯೋಜನೆ ಸ್ವಾಗತಾರ್ಹ. ನಮ್ಮ ಶಕ್ತಿ ಒಂದು ಕಡೆ ಸೇರಿದಾಗಲೇ ಗೊತ್ತಾಗುವುದು. 38 ಪಂಗಡಗಳೂ ಶಕ್ತಿಶಾಲಿಯಾಗಿದ್ದು, ಸ್ವಾಭಿಮಾನದ ಬದುಕು ಸಾಗಿಸುತ್ತಿವೆ. ಎಲ್ಲಾ ಪಂಗಡಗಳು ಅವರವರ ವೃತ್ತಿ ಮಾಡುತ್ತಾ ಮುಂದಿನ ಪೀಳಿಗೆಯ ಭವಿಷ್ಯ ಬರೆಯಬೇಕಿದೆ ಎಂದರು.

ಸಮಾಜ ಉತ್ತಮ ರೀತಿಯಲ್ಲಿರಲಿದೆ:ನಮ್ಮ ಕುಲಕಸುಬು ಮಾಡುತ್ತಾ ಬದಲಾವಣೆಯಾಗಿರುವ ಈ ಶತಮಾನದಲ್ಲಿ ನಮ್ಮ ಮಕ್ಕಳು ಬೇರೆ ವೃತ್ತಿಗೆ ಹೋಗಬೇಕು. ಡಾಕ್ಟರ್, ಇಂಜಿನಿಯರ್ ಮಾತ್ರವಲ್ಲ, ಐಟಿ ಬಿಟಿ ಬೇರೆ ಬೇರೆ ವೃತ್ತಿ ಕಡೆಗೂ ಹೋಗಬೇಕು. ಒಳ್ಳೆಯ ಶಿಕ್ಷಣ ಪಡೆಯಬೇಕು. ಆಗ ಸಮಾಜ ಉತ್ತಮ ರೀತಿಯಲ್ಲಿರಲಿದೆ ಎಂದು ಕ್ಷತ್ರೀಯರು ಕುಲಕಸುಬು ಬಿಟ್ಟು ಬೇರೆ ವೃತ್ತಿಯೆಡೆಗೆ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ:ಪ್ರಾಮಾಣಿಕವಾಗಿ ನೀವು ನಿಮ್ಮ ಕಸುಬು ಮಾಡುತ್ತಿದ್ದೀರಿ. ನಿಮ್ಮ ನಿಮ್ಮ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೀರಿ. ನಮ್ಮ ನಮ್ಮ ಬದುಕಿನ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಬದಲಾವಣೆಯಾಗುತ್ತಿದೆ. ಇದನ್ನೂ ನಾವು ಗಮನಿಸಬೇಕಿದೆ. ನಮ್ಮ ಕೈಯಲ್ಲಿ ಐದು ಬೆರಳಿವೆ. ಅವುಗಳಲ್ಲಿ ಒಂದೊಂದೇ ಬೆರಳಿಗೆ ಶಕ್ತಿಯಿಲ್ಲ. ಆದರೆ, ಎಲ್ಲಾ ಬೆರಳು ಸೇರಿ ಮುಷ್ಠಿಯಾದಲ್ಲಿ ಶಕ್ತಿ ಇರಲಿದೆ. ಅದೇ ರೀತಿ ನಿಮ್ಮ ಸಮಾಜ ಮುಷ್ಠಿಯಾಗಿ ಶಕ್ತಿಯಾಗಿದೆ. ಉಪ ಪಂಗಡಗಳಿಗೆ ಸಾಮಾಜಿಕ ನ್ಯಾಯ ಕೇಳಿದ್ದೀರಿ. ಅದನ್ನು ಖಂಡಿತವಾಗಿ ಕಾನೂನಾತ್ಮಕವಾಗಿ ನ್ಯಾಯಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರ ನಿಮ್ಮ ಜೊತೆಗಿದೆ: ಕುಲಕಸುಬುಗಳಿಗೆ ನಿಗಮದ ಬೇಡಿಕೆ ಇರಿಸಿದ್ದೀರಿ. ಆರ್ಥಿಕ ಸಹಾಯ ಕೇಳಿದ್ದೀರಿ. ಬಜೆಟ್​ನಲ್ಲಿ ಅದನ್ನು ಘೋಷಣೆ ಮಾಡುತ್ತೇನೆ. ಸಮುದಾಯಕ್ಕೆ ಸಮುದಾಯ ಭವನದ ಬೇಡಿಕೆ ಇದೆ. ಇದನ್ನು ಪರಿಗಣಿಸಲಾಗುತ್ತದೆ. ಬೆಂಗಳೂರಿನಲ್ಲಿ ಕ್ಷತ್ರೀಯ ಸಮಾಜದ ಕೇಂದ್ರ ಸ್ಥಳಕ್ಕೆ ಮನವಿ ಬಂದಿದೆ. ಅದಕ್ಕೂ ಸ್ಥಳ ಕೊಡಲಾಗುತ್ತದೆ. ಎಜುಕೇಷನ್, ಎಂಪ್ಲಾಯ್​ಮೆಂಟ್, ಎಂಪವರ್​ಮೆಂಟ್​ ಈ ಮೂರು ದೃಷ್ಟಿಯಿಂದ ನಾವು ಕೆಲಸ ಮಾಡಲಿದ್ದೇವೆ. ರಾಜಕೀಯವಾಗಿ ಹಲವು ಸಮಯದಲ್ಲಿ ನಿಮಗೆ ನಾಯಕತ್ವ ಸಿಕ್ಕಿದೆ. ಇನ್ನು ಕೆಲವು ಬಾರಿ ಸಿಕ್ಕಿಲ್ಲ. ಆದರೆ ನಮ್ಮ ಸರ್ಕಾರ ನಿಮ್ಮ ಜೊತೆಗಿದೆ ಎಂದರು.

ನಿಮ್ಮ ಸಮಾಜ ತ್ಯಾಗ ಮಾಡಿದೆ:ನೀವು ಯಾವಾಗಲೂ ದೇಶಪ್ರೇಮಿಗಳು. ದೇಶಭಕ್ತರು. ಬ್ರಿಟೀಷರ ವಿರುದ್ಧ ದೊಡ್ಡ ಹೋರಾಟ ಮಾಡಿದ್ದೀರಿ. ರಾಜ ಮಹಾರಾಜರ ಕಾಲದಲ್ಲಿಯೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರು ನೀವು. ಪ್ರಜಾಪ್ರಭುತ್ವ ಬಂದಾಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿಮ್ಮ ಸಮಾಜ ತ್ಯಾಗ ಮಾಡಿದೆ. ಹಾಗಾಗಿಯೇ ಮಿಲಿಟರಿಯಲ್ಲಿ ಕ್ಷತ್ರೀಯರ ಸಲುವಾಗಿ ಮರಾಠ ರೆಜಿಮೆಂಟ್ ಇದೆ. ನಿಮ್ಮ ಕುಲದಲ್ಲಿ ಹುಟ್ಟಿದ್ದ ಪವಾಡ ಪುರುಷರು, ವೀರರು ಧೀರರಾಗಿದ್ದಾರೆ.

ಜ್ಞಾನದ ಕತ್ತಿ ಹಿಡಿಯುವುದೂ ಗೊತ್ತಿಗೆ:ರಾಮ, ಕೃಷ್ಣ ಎಲ್ಲರೂ ಕ್ಷತ್ರೀಯರು. ಅಶೋಕ ಕೂಡ ಕ್ಷತ್ರೀಯ, ರಾಣಾ ಪ್ರತಾಪ್ ಸಿಂಗ್, ಶಿವಾಜಿ ಮಹಾರಾಜ್ ಎಲ್ಲರೂ ಕ್ಷತ್ರೀಯರು, ಸ್ವಾಮಿ ವಿವೇಕಾನಂದರು ಕೂಡ ಕ್ಷತ್ರೀಯರು, ಕತ್ತಿಯನ್ನು ಹಿಡಿದು ನಿಮಗೆ ಗೊತ್ತಿದೆ. ಜ್ಞಾನದ ಕತ್ತಿ ಹಿಡಿಯುವುದೂ ಗೊತ್ತಿಗೆ ಎನ್ನುವುದನ್ನು ವಿವೇಕಾನಂದರು ತೋರಿಸಿದ್ದಾರೆ. ಯಾವ ಸಮುದಾಯಕ್ಕೆ ದೊಡ್ಡ ಇತಿಹಾಸ ಇದೆಯೋ ಅವರು ಮಾತ್ರ ದೊಡ್ಡ ಭವಿಷ್ಯ ಬರೆಯಲು ಸಾಧ್ಯ ಎಂದು ಕ್ಷತ್ರೀಯ ಸಮಾಜದ ಕೊಡುಗೆಯನ್ನು ಸಿಎಂ ಸ್ಮರಿಸಿದರು.

ಸ್ವಾತಂತ್ರ್ಯ ನಂತರ ದೊಡ್ಡ ತ್ಯಾಗ ಮಾಡಿದ್ದು ಕ್ಷತ್ರೀಯರು. ಬಹಳ ಸಂಖ್ಯೆಯ ರಾಜಸತ್ವ ಕ್ಷತ್ರೀಯರ ಕೈಯಲ್ಲಿ ಇತ್ತು. ಅವರೆಲ್ಲಾ ಭಾರತದೊಂದಿಗೆ ವಿಲೀನವಾಗಿ ಸಾಮಾನ್ಯರಂತೆ ಬದುಕಲು ತಮ್ಮ ರಾಜಸತ್ವವನ್ನು ತ್ಯಾಗ ಮಾಡಿದರು. ಇಂತಹ ದೊಡ್ಡ ಪರಂಪರೆ ನಿಮಗೆ ಇದೆ. ನಿಮ್ಮ ಬೇಡಿಕೆ ಈಡೇರಿಸಲು ಮತ್ತು ನಿಮ್ಮ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ. ನಿಮಗೆ ಹೆಗಲು ಕೊಟ್ಟು ನಾವು ನಿಲ್ಲಲಿದ್ದೇವೆ ಎನ್ನುವ ಭರವಸೆ ನೀಡಿದರು.

ಇದನ್ನೂ ಓದಿ :ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿ ಎಸ್ ಯಡಿಯೂರಪ್ಪ

ABOUT THE AUTHOR

...view details