ಬೆಂಗಳೂರು : 2021 ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದ ವರ್ಷವಾಗಿದೆ. ಕೋವಿಡ್ ನಡುವೆಯೂ ನಾಯಕತ್ವ ಬದಲಾವಣೆಯ ಹೈಡ್ರಾಮಾ ನಡೆಯಿತು. ಬಿಜೆಪಿಯ ಅಗ್ರ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು. ಬಿಎಸ್ವೈ ಆಪ್ತ ಬಳಗದ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಕೋವಿಡ್ ಸಂಕಷ್ಟ, ನೆರೆ ಹಾನಿ, ಆರ್ಥಿಕ ಸಮಸ್ಯೆಗಳ ನಡುವೆ ರಾಜ್ಯವನ್ನು ಮುನ್ನಡೆಸುತ್ತಿದ್ದು, ನಾಯಕತ್ವ ಬದಲಾವಣೆ ಪ್ರಹಸನದ ಪಕ್ಷಿ ನೋಟ ಇಲ್ಲಿದೆ.
2021ರ ಮೊದಲ ಅರ್ಧ ವರ್ಷ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತ ನಡೆಸಿದೆ. ದ್ವಿತೀಯಾರ್ಧ ಬೊಮ್ಮಾಯಿ ತೆಕ್ಕೆಗೆ ಸಿಕ್ಕಿದೆ. ಜೂನ್ನಿಂದಲೇ ನಾಯಕತ್ವ ಪ್ರಹಸನದ ಚಟುವಟಿಕೆ ತಾರ್ಕಿಕ ಅಂತ್ಯಕ್ಕೆ ಬಂದಿದ್ದರೂ ಸರ್ಕಾರಕ್ಕೆ ಎರಡು ವರ್ಷವಾಗುವ ಸಂದರ್ಭದಲ್ಲೇ ರಾಜೀನಾಮೆ ನೀಡುವ ಯಡಿಯೂರಪ್ಪ ಇಂಗಿತಕ್ಕೆ ಹೈಕಮಾಂಡ್ ಸಮ್ಮತಿಸಿದ್ದರಿಂದ, ಹೈಡ್ರಾಮಾ ಸುದೀರ್ಘ 1 ತಿಂಗಳ ಕಾಲ ರಾಜ್ಯದಲ್ಲಿ ನಡೆಯಬೇಕಾಯಿತು.
ಪಕ್ಷದಲ್ಲಿ 75 ವರ್ಷ ತುಂಬಿದವರಿಗೆ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನೀಡುವುದಿಲ್ಲ ಎನ್ನುವ ನಿಯಮ ಮೀರಿ ಯಡಿಯೂರಪ್ಪಗೆ ಅವಕಾಶ ಕೊಟ್ಟಿದ್ದು, ಅದನ್ನು ಸ್ಮರಿಸಿಯೇ ಯಡಿಯೂರಪ್ಪ ಹೈಕಮಾಂಡ್ ಹೇಳುತ್ತಿದ್ದಂತೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೂ ಮುನ್ನ ಏನೆಲ್ಲಾ ನಡೆಯಿತು ಎನ್ನುವ ವಿವರ ಇಲ್ಲಿದೆ.
ಜುಲೈ :ನಾಯಕತ್ವ ಬದಲಾವಣೆ ವದಂತಿಗಳ ನಡುವೆ ಪುತ್ರ ಹಾಗೂ ಆಪ್ತನೊಂದಿಗೆ ದೆಹಲಿಗೆ ತೆರಳಿದ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಮೋದಿ ಭೇಟಿಯಾದರು. ವರಿಷ್ಠರ ಕೈಗೆ ರಾಜೀನಾಮೆ ಪತ್ರ ಕೊಟ್ಟು ಬಂದಿದ್ದಾರೆ ಎನ್ನುವ ವದಂತಿ ಹರಡುತ್ತಿದ್ದಂತೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ರಾಜೀನಾಮೆ ಕೊಟ್ಟಿದ್ರೆ ಅದನ್ನು ಮುಚ್ಚಿಡುವ ಪ್ರಶ್ನೆ ಇಲ್ಲ, ರಾಜೀನಾಮೆ ನೀಡಲು ಯಾರೂ ಸೂಚಿಸಿಲ್ಲ ಎಂದು ಯಡಿಯೂರಪ್ಪ ದೆಹಲಿ ಪ್ರವಾಸದ ಬಳಿಕ ಸ್ಪಷ್ಟಪಡಿಸಿದರು.
ನಂತರ ದಿಢೀರ್ ಎಂದು ಜುಲೈ 25ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದರು ಯಡಿಯೂರಪ್ಪ. ಆದರೆ, ನಂತರ ನಡೆದ ಕೆಲ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಿದರು. ಈಶ್ವರಪ್ಪ, ಶೆಟ್ಟರ್ ತಂಡವನ್ನು ಕೈಬಿಡಲಾಗುತ್ತದೆ ಎನ್ನುವ ಹೇಳಿಕೆಯುಳ್ಳ ಕಟೀಲ್ ರದ್ದು ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ನಾಯಕತ್ವ ಬದಲಾವಣೆ ವಿಷಯಕ್ಕೆ ಹೊಸ ತಿರುವು ಬಂದಿತು. ಇದರ ನಡುವೆ ದಿಢೀರ್ ನವದೆಹಲಿಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್ ಬಿಜೆಪಿ ಪಾಳಯದಲ್ಲಿ ಹೆಚ್ಚಿನ ಕುತೂಹಲ ಮೂಡುವಂತೆ ಮಾಡಿದರು.
ಬಿಎಸ್ವೈ ಸೂಚನೆ ಉಲ್ಲಂಘಿಸಿ ದೆಹಲಿಗೆ ತೆರಳಿದ ರೇಣುಕಾಚಾರ್ಯ ಬೆನ್ನಲ್ಲೇ ಸಿಎಂ ಸ್ಥಾನದ ಆಕಾಂಕ್ಷಿಗಳಾದ ನಿರಾಣಿ, ಅರವಿಂದ ಬೆಲ್ಲದ್, ಕಾಶಿ ವಿಶ್ವನಾಥನ ಮೊರೆ ಹೋದರು. ಶಾಸಕಾಂಗ ಪಕ್ಷದ ಸಭೆ ರದ್ದು ಬೆನ್ನಲ್ಲೇ ಭೋಜನಕೂಟವನ್ನೂ ಮುಂದೂಡಿದ ಸಿಎಂ, ಜುಲೈ 26ರಂದು ವರಿಷ್ಠರು ನೀಡುವ ಸೂಚನೆಯಂತೆ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದು ರಾಜೀನಾಮೆ ನೀಡುವ ಸೂಚನೆ ನೀಡಿದರು. ರಾಜೀನಾಮೆ ಕುರಿತು ಸಿಎಂ ಸುಳಿವು ನೀಡುತ್ತಿದ್ದಂತೆ ಬಿಎಸ್ವೈ ನಿವಾಸಕ್ಕೆ ಸಚಿವರು ದೌಡಾಯಿಸಿ ಸಭೆ ನಡೆಸಿದರು.
ಜುಲೈ 26ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜನೆಯಾಗಿದ್ದ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸೌಧದಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಿದರು. ಹೈಕಮಾಂಡ್ನ ಒತ್ತಡವಿರಲಿಲ್ಲ, ಸ್ವಯಂ ರಾಜೀನಾಮೆ ನೀಡಿದ್ದೇನೆ, ರಾಜ್ಯಪಾಲರ ಹುದ್ದೆ ಅಲಂಕರಿಸಲ್ಲ, ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮುಂದಿನ ರಾಜಕೀಯ ನಡೆ ಕುರಿತು ಸ್ಪಷ್ಟನೆ ನೀಡಿದರು.
ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನ ನೇಮಿಸಿದ ಬಿಜೆಪಿ ಸಂಸದೀಯ ಮಂಡಳಿ, ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿತು. ಬೊಮ್ಮಾಯಿ ಒಬ್ಬರೇ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಆಗಿ ಬೊಮ್ಮಾಯಿ ಸರ್ಕಾರದಲ್ಲಿ ಭಾಗಿಯಾಗಲು ನನಗೆ ಸಾಧ್ಯವಿಲ್ಲ ಎಂದು ಹಿರಿಯ ನಾಯಕ ಜಗದೀಶ್ ಶೆಟ್ಟರ್ ಘೋಷಣೆ ಮಾಡಿದರು.
ಆಗಸ್ಟ್ :ಸಿಎಂ ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್ ನೀಡಿದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ ಕುರಿತು ಮಹತ್ವದ ಮಾತುಕತೆ ನಡೆಸಿದರು. ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, 29 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಬಿಎಸ್ವೈ ಸಂಪುಟದಲ್ಲಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸುರೇಶ್ಕುಮಾರ್, ಆರ್.ಶಂಕರ್, ಸಿ.ಪಿ ಯೋಗೀಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಜಗದೀಶ್ ಶೆಟ್ಟರ್ ಅವರನ್ನು ಹೊರಗಿಡಲಾಗಿದೆ. ಹೊಸಬರಾದ ಹಾಲಪ್ಪ ಆಚಾರ್, ಸುನೀಲ್ ಕುಮಾರ್, ಬಿ.ಸಿ ನಾಗೇಶ್, ಮುನಿರತ್ನ, ಶಂಕರ್ ಪಾಟೀಲ್ ಮುನೇನಕೊಪ್ಪ, ಆರಗ ಜ್ಞಾನೇಂದ್ರಗೆ ಮೊದಲ ಬಾರಿ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ.