ಬೆಂಗಳೂರು:ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿ ಹಬ್ಬವನ್ನು ಆಚರಿಸಿ ಎಂದು ಕರೆ ನೀಡಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಡಿನ ಜನತೆಗೆ ಗಣೇಶ ಸುಖ ಶಾಂತಿ ಅಭಿವೃದ್ಧಿಯನ್ನು ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಗಣೇಶ ಅಂದ್ರೆ ಸಂತೋಷದ ಪ್ರತೀಕ, ನಾಡಿ ಜನತೆಗೆ ಆ ಸಂತೋಷ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ.
ಕೋವಿಡ್ ನಿಯಮಗಳನ್ನ ಪಾಲನೆ ಮಾಡಿ ಆಚರಣೆ ಮಾಡಲಿ ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದರು. ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ನಿಯಮ ಸಡಿಲಿಕೆ ಮಾಡುವ ವಿಚಾರ ಕುರಿತು ಬಿಬಿಎಂಪಿ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಬಿಎಸ್ವೈ ಶುಭಾಶಯ:
ನಾಡಿನ ಎಲ್ಲ ಭಕ್ತರಿಗೆ ವಿನಾಯಕ ಚತುರ್ಥಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ವಿಘ್ನನಿವಾರಕನಾದ ವಿಘ್ನೇಶ್ವರನು ನಾಡಿನ ಪ್ರಗತಿಗೆ ಎದುರಾಗುವ ಎಲ್ಲ ವಿಘ್ನಗಳನ್ನು ದೂರ ಮಾಡಲಿ, ಸಮಸ್ತ ಜನತೆಗೆ ಸುಖ, ಸಂತೋಷ, ಆರೋಗ್ಯ ಭಾಗ್ಯಗಳನ್ನು ಕೊಟ್ಟು ಸದಾ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದು, ಕನ್ನಡ ನಾಡು, ಭಾರತ ಹಾಗೂ ವಿಶ್ವವು ಶೀಘ್ರವೇ ಕೋವಿಡ್ ಮುಕ್ತವಾಗಲಿ, ವಿಘ್ನ ವಿನಾಯಕನು ನಮ್ಮೆಲ್ಲರಿಗೂ ಅಭ್ಯುದಯ - ಸಮೃದ್ಧತೆಯನ್ನು ತಂದು ಕೊಡುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಜನತೆ ಕೋವಿಡ್ ನಿಯಮಾವಳಿ ಅನುಸರಿಸಿ ಹಬ್ಬವನ್ನು ಆಚರಿಸಬೇಕು. ಶಾಂತಿಯುತವಾಗಿ ಗಣೇಶ ಚತುರ್ಥಿ ಆಚರಿಸುವ ಮೂಲಕ ಕೋವಿಡ್ ಮುಕ್ತ ವಿಶ್ವಕ್ಕಾಗಿ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಲ್ಲರ ವಿಘ್ನ ನಿವಾರಿಸಿ ಕರುಣೆ ತೋರಲಿ:
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಉನ್ನತ ಶಿಕ್ಷಣ, ಐಟಿ - ಬಿಟಿ, ವಿಜ್ಞಾನ - ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ಧರ್ಮಪತ್ನಿ ಸಮೇತರಾಗಿ ಮೊದಲ ಪೂಜೆ ವೇಳೆಗೆ ದೇಗುಲಕ್ಕೆ ಆಗಮಿಸಿ, ಪೂಜೆಯಲ್ಲಿ ಭಾಗಿಯಾದರು.
ಇದೇ ವೇಳೆ ಮಾತನಾಡಿದ ಸಚಿವರು, ವಿಘ್ನನಿವಾರಕ ಗಣಪತಿ ಎಲ್ಲರ ವಿಘ್ನ ನಿವಾರಿಸಿ ಕರುಣೆ ತೋರಲಿ, ಕೊರೊನಾ ಮಹಾಮಾರಿ ತೊಲಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿನಾಯಕನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಕೋವಿಡ್ ನಿಯಮ ಪಾಲಿಸುತ್ತ ಭಗವಂತನ ದರ್ಶನ ಪಡೆದರು. ಸಚಿವರು ಅಲ್ಲಿ ನೆರೆದಿದ್ದ ಎಲ್ಲ ಭಕ್ತಾಧಿಗಳಿಗೆ ಹಬ್ಬದ ಶುಭಾಶಯ ಕೋರಿದರು.
ಇದನ್ಣೂ ಓದಿ:T-20 World Cup: ಕೆರಿಬಿಯನ್ ತಂಡ ಪ್ರಕಟ.. ನರೇನ್ ಔಟ್, ರಾಮ್ಪಾಲ್ ಕಮ್ಬ್ಯಾಕ್!