ಬೆಂಗಳೂರು: ನ.16 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾಗಿಯಾಗಲಿದ್ದಾರೆ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ಅ.29 (ಶುಕ್ರವಾರ) ಎಂದು ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಸ್ಮರಣಾರ್ಥ ನ.16 ರಂದು ಮಧ್ಯಾಹ್ನ 3:30 ಅರಮನೆ ಮೈದಾನದಲ್ಲಿರುವ ನಲ್ಪಾಡ್ ಪ್ಯಾಲೇಸ್ ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 'ಪುನೀತ ನಮನ' ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ಭಾಗವಹಿಸಿ ನಮನ ಸಲ್ಲಿಕೆ ಮಾಡಲಿದ್ದಾರೆ.
ಡಾ.ರಾಜ್ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸಿಎಂ ಬೊಮ್ಮಾಯಿ, ಪುನೀತ್ ಅಗಲಿಕೆ ವೇಳೆ ಸಾರ್ವಜನಿಕ ದರ್ಶನ, ಅಂತಿಮ ನಮನ, ಅಂತ್ಯಕ್ರಿಯೆ ಕಾರ್ಯದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವಂತೆ ಖುದ್ದಾಗಿ ನೋಡಿಕೊಂಡಿದ್ದರು. ಇದೀಗ ಪುನೀತ ನಮನ ಕಾರ್ಯಕ್ರಮದಲ್ಲೂ ಭಾಗಿಯಾಗಿ ಗೌರವ ಸಲ್ಲಿಕೆ ಮಾಡಲಿದ್ದಾರೆ.
ಇದನ್ನೂ ಓದಿ: ಅಪ್ಪುಗೆ ಬಸವಶ್ರೀ ಪುರಸ್ಕಾರ: ಚಿತ್ರದುರ್ಗದ ಮುರುಘಾ ಶ್ರೀ ಘೋಷಣೆ