ಬೆಂಗಳೂರು: ಬೆಂಗಾವಲು ವಾಹನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕೋವಿಡ್ ಮೃತರಿಗೆ ಪರಿಹಾರ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಸಿಎಂ ಬೊಮ್ಮಾಯಿ ಅವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ ವಿಳಂಬವಾಗಿ ತಲುಪಿದ ಪ್ರಸಂಗ ನಡೆಯಿತು.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿನ ಕಾರ್ಯಕ್ರಮಕ್ಕೆ ಹೋಗುವಾಗ ದಾರಿ ತಪ್ಪಿದ ಸಿಎಂ ವಾಹನವು ಸುತ್ತುಹಾಕಿಕೊಂಡು ತೆರಳಿತು. ಬೆಂಗಾವಲು ವಾಹನ ಸಿಬ್ಬಂದಿ ಸಿಎಂ ತೆರಳಬೇಕಾದ ಮಾರ್ಗ ನಕ್ಷೆಯಲ್ಲಿ ಗೊಂದಲ ಮಾಡಿಕೊಂಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.
ಕಾರ್ಪೊರೇಷನ್ ಸರ್ಕಲ್ನಿಂದ ಬಸವನಗುಡಿಗೆ ಬರಬೇಕಿದ್ದ ಬೊಮ್ಮಾಯಿ ಕಾರ್ಪೊರೇಷನ್ ಸರ್ಕಲ್ - ಮೈಸೂರು ಬ್ಯಾಂಕ್ ಸರ್ಕಲ್ - ಚಾಲುಕ್ಯ ವೃತ್ತ - ರೇಸ್ ಕೋರ್ಸ್ ಸರ್ಕಲ್ - ಮತ್ತೆ ವಾಪಸ್ ಚಾಲುಕ್ಯ ವೃತ್ತ - ಕೆ.ಆರ್. ಸರ್ಕಲ್ - ಕಾರ್ಪೊರೇಷನ್ ಸರ್ಕಲ್ - ಲಾಲ್ ಬಾಗ್ ಸರ್ಕಲ್ ಮೂಲಕ ನ್ಯಾಷನಲ್ ಕಾಲೇಜ್ ಮೈದಾನ ಆಗಮಿಸಿದರು. 11.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಮೊದಲೇ ಅರ್ಧ ಗಂಟೆ ವಿಳಂಬ ಆಗಿತ್ತು. ಬೆಂಗಾವಲು ಸಿಬ್ಬಂದಿಯ ಎಡವಟ್ಟಿನಿಂದ ಮತ್ತೆ 15 ನಿಮಿಷ ತಡವಾಯಿತು.
ಬೆಂಗಾವಲು ವಾಹನದ ಗೊಂದಲದಿಂದ ಸಂಚಾರ ಪೊಲೀಸರು ಕೂಡ ಕಕ್ಕಾಬಿಕ್ಕಿಯಾದರು. ಸಿಎಂ ತೆರಳುತ್ತಿದ್ದ ರಸ್ತೆ ಮಾರ್ಗಗಳ್ಲಲಿ ತರಾತುರಿಯಲ್ಲಿ ದಾರಿ ಮಾಡಿಕೊಡುವಲ್ಲಿ ಪೊಲೀಸರು ಹೈರಾಣಾದರು. ಈ ವೇಳೆ ನೃಪತುಂಗ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆಯಲ್ಲಿ ಸಿಎಂ ವಾಹನ ಸಿಲುಕಿತ್ತು. ಅಲ್ಲದೆ, ಒಂದು ಆ್ಯಂಬುಲೆನ್ಸ್ ಹಾಗೂ ಇತರ ವಾಹನ ಸವಾರರು ಕೂಡ ಮುಂದೆ ಸಾಗಲಾಗದೆ ಪರದಾಡುವಂತಾಗಿತ್ತು.
ಇದನ್ನೂ ಓದಿ:ವಿವಾದದ ಬಳಿಕ 'ಹಿಂದೂ ಪುನರುಜ್ಜೀವನ'ದ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ