ಕರ್ನಾಟಕ

karnataka

ETV Bharat / state

ಪುನೀತ್ ಕೇವಲ ಹೆಸರಾಗಿ ಉಳಿದಿಲ್ಲ, ಪ್ರತಿಯೊಬ್ಬ ಕನ್ನಡಿಗರ ಉಸಿರಾಗಿದ್ದಾರೆ: ಬಸವರಾಜ ಬೊಮ್ಮಾಯಿ - ಪುನೀತ್ ರಾಜ್​ಕುಮಾರ್

ಇಂದಿಗೂ ಅಪ್ಪು ಸಮಾಧಿ ವೀಕ್ಷಣೆಗೆ ಸಾವಿರಾರು ಜನ ಅಭಿಮಾನಿಗಳು ಬರುತ್ತಿದ್ದಾರೆ. ಅಪ್ಪು ಎಲ್ಲೂ ಹೋಗಿಲ್ಲ ನಮ್ಮ ಜೊತೆಯಲ್ಲೇ ಇದ್ದಾರೆ. ಪುನೀತ್ ಜಾತ್ರೆ ಇದೇ ರೀತಿ ಸಾಗುತ್ತದೆ. ಅದರಲ್ಲಿ ಭಾಗಿಯಾದ ನಾವೇ ಧನ್ಯರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

By

Published : Mar 28, 2022, 6:39 AM IST

ಬೆಂಗಳೂರು: ಪುನೀತ್ ರಾಜ್​ಕುಮಾರ್ ಈಗ ಕೇವಲ ಹೆಸರಾಗಿ ಉಳಿದಿಲ್ಲ, ಪ್ರತಿಯೊಬ್ಬ ಕನ್ನಡಿಗರ ಉಸಿರಾಗಿದ್ದಾರೆ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಎಲ್ಲರ ಜೊತೆ ನಗುತ್ತಲೇ ಇದ್ದು, ನಗುತ್ತಲೇ ಹೊರಟು ಹೋದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.

ಭಾನುವಾರ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘ ಆಯೋಜಿಸಿದ್ದ ಪುನೀತ್ ರಾಜ್‍ಕುಮಾರ್ ಪ್ರತಿಮೆ ಅನಾವರಣ ಹಾಗೂ ಗಂಧದ ಗುಡಿ ಉದ್ಯಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಯಲ್ಲಿ ಅಪ್ಪುನನ್ನು ಭಾವಚಿತ್ರಗಳ ಸಮೇತ ಪೂಜಿಸುತ್ತಿದ್ದಾರೆ. ಇಂದಿಗೂ ಅಪ್ಪು ಸಮಾಧಿ ವೀಕ್ಷಣೆಗೆ ಸಾವಿರಾರು ಜನ ಅಭಿಮಾನಿಗಳು ಬರುತ್ತಿದ್ದಾರೆ.

ಅಪ್ಪು ಎಲ್ಲೂ ಹೋಗಿಲ್ಲ ನಮ್ಮ ಜೊತೆಯಲ್ಲೇ ಇದ್ದಾರೆ. ಪುನೀತ್ ಜಾತ್ರೆ ಇದೇ ರೀತಿ ಸಾಗುತ್ತದೆ. ಅದರಲ್ಲಿ ಭಾಗಿಯಾದ ನಾವೇ ಧನ್ಯರು. ಅಪ್ಪು ಎಂದೆಂದಿಗೂ ಜೀವಂತ, ಅಜಾತಶತ್ರು. ಕನ್ನಡ ಚಿತ್ರರಂಗದಲ್ಲಿ ಮುಗ್ದತೆಯನ್ನು ಕಾಪಾಡಿಕೊಂಡವರು ರಾಜ್ ಕುಮಾರ್, ಪುನೀತ್ ಎಂದು ಬೊಮ್ಮಾಯಿ ಹೇಳಿದರು.

ಪುನೀತ್ ರಾಜ್‍ಕುಮಾರ್ ಪ್ರತಿಮೆ ಅನಾವರಣ ಕಾರ್ಯಕ್ರಮ

ಅಪ್ಪುಗೆ ಕರ್ನಾಟಕ ರತ್ನ ಘೋಷಣೆಯಾಗಿದೆ. ಶಿವಣ್ಣ, ರಾಘಣ್ಣನವರ ಜೊತೆ ಮಾತನಾಡಿ ಆದಷ್ಟು ಬೇಗ ದೊಡ್ಡಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಪುನೀತ್ ನಿಧನರಾದಾಗ ಶಿವಣ್ಣ, ರಾಘಣ್ಣ ಅತೀ ಮುತ್ಸದ್ದಿತನದಿಂದ ನಡೆದುಕೊಂಡರು. ಯಾವುದೇ ಅಹಿತಕರ ಘಟನೆಯಾಗದಂತೆ ಸಹಕರಿಸಿದರು. ಅವರ ಕುಟುಂಬಕ್ಕೆ ನಮ್ಮ ಸರ್ಕಾರ ಚಿರರುಣಿ ಎಂದು ಹೇಳಿದರು.

ಅಪ್ಪು ನಟಿಸಿದ ಕೊನೆಯ 4 ಸಿನಿಮಾಗಳು ಸಮಾಜಕ್ಕೆ ಮಾದರಿ:ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಘವೇಂದ್ರ ರಾಜ್​ಕುಮಾರ್ ಮಾತನಾಡಿ, ಪುನೀತ್ ನಟಿಸಿದ ಕೊನೆಯ 4 ಸಿನಿಮಾಗಳು ಸಮಾಜಕ್ಕೆ ಮಾದರಿಯಾಗುವಂತಹವು. ರಾಜಕುಮಾರ, ಯುವರತ್ನ, ಗಂಧದಗುಡಿ, ಜೇಮ್ಸ್ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳಾಗಿವೆ.
ಅಪ್ಪು ಸಮಾಜಕ್ಕೆ ಸೇವೆ ಮಾಡಿ, ಹೇಳೇದೆ ಕೇಳದೆ ಹೊರಟು ಹೋದ. ಅವನ ಬದುಕಿದ 46 ವರ್ಷವೂ ಸಿನಿಮಾದಲ್ಲೇ ಇದ್ದ. ಅಪ್ಪು ಸದಾ ಅಭಿಮಾನಿಗಳ ಹೃದಯದಲ್ಲಿ ಇರುತ್ತಾನೆ. ಈಗ ಅಪ್ಪ ಅಮ್ಮನ ಜೊತೆ ಮಲಗಿದ್ದಾನೆ ಅಷ್ಟೇ ಎಂದು ಹೇಳಿದರು.

ಸಿಎಂ ಬೊಮ್ಮಾಯಿ ನಮ್ಮ ಮನೆಯ ಸದಸ್ಯರಂತೆ: ಸಿಎಂ ಬೊಮ್ಮಾಯಿ ನಮ್ಮ ಮನೆಯ ಸದಸ್ಯರಂತೆ ಇದ್ದಾರೆ. ಅಪ್ಪು ಅಗಲಿದ ದಿನದಿಂದ ಬೊಮ್ಮಾಯಿ ನಮ್ಮ ಕುಟುಂಬದ ಜೊತೆಗಿದ್ದಾರೆ. ಸಿಎಂಗೆ ರಾಜ​ಕುಮಾರ್ ಕುಟುಂಬ ಸದಾ ಚಿರರುಣಿ. ಇಲ್ಲಿ ಅಪ್ಪಾಜಿ ಅವರ ಪ್ರತಿಮೆ ಅಪ್ಪು ಅನಾವರಣ ಮಾಡಿದ್ದ. ಇಂದು ನಾವು ಅದೇ ಜಾಗದಲ್ಲಿ ಅವನ ಪ್ರತಿಮೆ ಅನಾವರಣ ಮಾಡುವಂತಾಯ್ತು ಎಂದು ರಾಘವೇಂದ್ರ ರಾಜಕುಮಾರ್ ನೋವು ತೋಡಿಕೊಂಡರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪುನೀತ್ ರಾಜ್‍ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಚಿವರಾದ ಮುನಿರತ್ನ, ವಿ ಸುನಿಲ್ ಕುಮಾರ್, ಸಂಸದ ಪಿ.ಸಿ ಮೋಹನ್, ರಾಘವೇಂದ್ರ ರಾಜಕುಮಾರ್, ತಾರಾ, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪ್ರಶಸ್ತಿ ಪುರಸ್ಕೃತರು ಸಭಾಂಗಣದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:'ಕೆಜಿಎಫ್: ಚಾಪ್ಟರ್ 2' ಚಿತ್ರದ ಟ್ರೈಲರ್ ಬಿಡುಗಡೆ: ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್​

ABOUT THE AUTHOR

...view details