ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಸೊರಗಿರುವ ಆದಾಯದ ಮಧ್ಯೆ ನಾಡಿನ ಜನರಿಗೆ ಪ್ರಿಯವಾಗುವಂತಹ ಬಜೆಟ್ ಮಂಡಿಸುವ ಅನಿವಾರ್ಯತೆಯಲ್ಲಿ ಸಿಎಂ ಇದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ ಅಳೆದು ತೂಗಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಸಿಎಂಗೆ ಮಿತಿ ಮೀರಿದ ಬದ್ಧ ವೆಚ್ಚದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಾರ್ಚ್ ಮೊದಲ ವಾರದಲ್ಲಿ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್ 2023ರ ವಿಧಾನಸಭೆ ಚುನಾವಣೆ ಮುನ್ನ ಮಂಡಿಸಲಿರುವ ಪೂರ್ಣ ಪ್ರಮಾಣದ ಆಯವ್ಯಯವಾಗಿದೆ. ಹೀಗಾಗಿ ಜನಪ್ರಿಯ, ಜನರಿಗೆ ಯಾವುದೇ ಹೊರೆ ಇಲ್ಲದ ಬಜೆಟ್ ಮಂಡಿಸುವ ಅನಿವಾರ್ಯತೆ ಸಿಎಂ ಬೊಮ್ಮಾಯಿ ಅವರದ್ದಾಗಿದೆ. ಅದಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.
ಆದರೆ, ಆರ್ಥಿಕ ಸಂಕಷ್ಟ ಸಿಎಂಗೆ ಎದುರಾಗಿರುವ ದೊಡ್ಡ ಸವಾಲು. ಆದಾಯ ಮೂಲಗಳು ಬರಿದಾಗಿದ್ದು, ಜನಪ್ರಿಯ ಬಜೆಟ್ ಮಂಡಿಸುವ ಜರೂರತ್ತು ಬಿಜೆಪಿ ಸರ್ಕಾರದ್ದು. ಕೊರೊನಾ ಲಾಕ್ಡೌನ್ನಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಕೇಂದ್ರದ ಸಹಾಯಾನುದಾನಕ್ಕೂ ಕತ್ತರಿ ಬಿದ್ದಿದೆ. ಸಂಪನ್ಮೂಲ ಕ್ರೋಢೀಕರಣ ಮಾರ್ಗಗಳೆಲ್ಲವೂ ನಿರೀಕ್ಷಿತ ಗುರಿ ಮುಟ್ಟದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿಗೆ ಬದ್ಧ ವೆಚ್ಚವೇ ಕಗ್ಗಂಟಾಗಿ ಪರಿಣಮಿಸಿದೆ.
ಸಿಎಂಗೆ ಬದ್ಧ ವೆಚ್ಚದ ತಲೆನೋವು:ಸೀಮಿತ ಸಂಪನ್ಮೂಲದ ಮಧ್ಯೆ ಅಳೆದು ತೂಗಿ ಸಿಎಂ ಬಜೆಟ್ ಮಂಡಿಸುವ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಈ ಮಧ್ಯೆ ಮಿತಿ ಮೀರಿದ ಬದ್ಧ ವೆಚ್ಚವನ್ನು ನಿಭಾಯಿಸುವುದೇ ಸಿಎಂ ಬೊಮ್ಮಾಯಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸರ್ಕಾರಿ ನೌಕರರ ವೇತನ, ಪಿಂಚಣಿ, ಬಡ್ಡಿ ಪಾವತಿ, ಆಡಳಿತ ವೆಚ್ಚ, ಸಹಾಯಧನವನ್ನು ಬದ್ಧ ವೆಚ್ಚವೆಂದು ಕರೆಯುತ್ತಾರೆ. ಈ ಮಿತಿ ಮೀರಿದ ಬದ್ಧ ವೆಚ್ಚ ಬಜೆಟ್ ಲೆಕ್ಕಾಚಾರವನ್ನು ಬುಡಮೇಲಾಗಿಸಿದೆ. ಬಜೆಟ್ ಬಹುಪಾಲು ಬದ್ಧ ವೆಚ್ಚಕ್ಕೇ ತಗುಲುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವುದೇ ದುಸ್ತರವಾಗಿ ಪರಿಣಮಿಸಿದೆ.