ಬೆಂಗಳೂರು:ಸುಸ್ಥಿರ ಗಣಿಗಾರಿಕೆಗೆ ಸಮಗ್ರ ಯೋಜನೆ ರೂಪಿಸಬೇಕೆಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ನಿಂದ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಕಾರ್ಯಾಗಾರ 2022ರ ಉದ್ಘಾಟಿಸಿ ಮಾತನಾಡಿದ ಅವರು, ಗಣಿಗಾರಿಕೆಯಿಂದ ಪ್ರಕೃತಿಯ ಮೇಲಿನ ದಾಳಿಯನ್ನು ತಡೆಯಬೇಕು ಎಂದರು.
ಸುಸ್ಥಿರ ಗಣಿಗಾರಿಕೆಗೆ ಸಮಗ್ರ ಯೋಜನೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ ಮುಂದಿನ 50 ವರ್ಷಗಳ ಅವಧಿಯಲ್ಲಿ ಸುಸ್ಥಿರ ಗಣಿಗಾರಿಕೆಯಿಂದ ಹಂತ - ಹಂತವಾಗಿ ಖನಿಜಗಳ ಬಳಕೆ ಹಾಗೂ ಅರಣ್ಯಗಳನ್ನು ಬೆಳೆಸುವ ಯೋಜನೆ ರೂಪಿಸಬೇಕು. ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಖನಿಜ, ಮರಳು,ಕಲ್ಲು, ಕಬ್ಬಿಣ ಅದಿರುಗಳ ಸಮತೋಲಿತ ಬಳಕೆ ಬಗ್ಗೆ ಗಮನಹರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
2022-23ರ ಆಯವ್ಯಯದಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆಯ ಮೇಲಾಗಿರುವ ದಾಳಿಯ ದುಷ್ಪರಿಣಾಮವನ್ನು ಸರಿದೂಗಿಸಲು ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಹಸಿರು ಆಯವ್ಯಯ ರೂಪಿಸಿ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ನಿಸರ್ಗ ಮತ್ತು ಮನುಷ್ಯ ಸೃಷ್ಟಿಯ ಭಾಗ. ಗಣಿಗಾರಿಕೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಈಗಿನ ತಂತ್ರಜ್ಞಾನದಿಂದ ಉಪಯುಕ್ತ ಸಂಪತ್ತಾಗಿ ಪರಿಣಮಿಸಿದೆ.
ಗಣಿಗಾರಿಕೆಗೆ ದೊಡ್ಡ ಇತಿಹಾಸವಿದೆ. ಹಿಂದಿನವರು ನಿಸರ್ಗದ ಗಣಿ ಸಂಪತ್ತನ್ನು ಉಳಿಸಿಕೊಂಡು ಬಂದಿದ್ದಾರೆ. ಭವಿಷ್ಯದ ಜನಾಂಗಕ್ಕೆ ಈ ಸಂಪತ್ತನ್ನು ಕಾಪಾಡಬೇಕಿದೆ. ಆದ್ದರಿಂದ ಸುಸ್ಥಿರ ಗಣಿಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳದ ಪ್ರದೇಶದಲ್ಲಿ ಟಾಟಾ ಕಂಪನಿ ಮೈನ್ಸ್ನವರು ಸುಸ್ಥಿರ ಗಣಿಗಾರಿಕೆ ಮಾಡಿ ಆ ಪ್ರದೇಶವನ್ನು ಅರಣ್ಯೀಕರಣ ಮಾಡಿ ಪ್ರಕೃತಿಯನ್ನು ಸಂರಕ್ಷಿಸಲಾಗಿರುವ ನಿದರ್ಶನಗಳಿವೆ. ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.
ಸರ್ಕಾರಕ್ಕೆ ಲಾಭಾಂಶ ನೀಡಿದ ಮಿನರಲ್ಸ್ ಕಾರ್ಪೊರೇಷನ್:ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್ ಸಂಸ್ಥೆಯು ತನ್ನ ಲಾಭಾಂಶದ 141 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಮತ್ತು 10 ಕೋಟಿ ರೂ.ಗಳ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿತು.
ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಅಧ್ಯಕ್ಷ ಲಿಂಗಮೂರ್ತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ, ವ್ಯವಸ್ಥಾಪಕ ನಿರ್ದೇಶಕ ಬಿಬಿ ಕಾವೇರಿ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪ್ರಸಿದ್ಧ ತೋಂಟದಾರ್ಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಶ್ರೀರಾಮಸೇನೆ ಒತ್ತಾಯ!