ಬೆಂಗಳೂರು: ಅಧಿಕಾರಕ್ಕೆ ಬಂದರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಕುರಿತು ಬಿಎಸ್ವೈ ನಿವಾಸದಲ್ಲಿ ನಡೆದ ಲಿಂಗಾಯತ ನಾಯಕರ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ, ಸಭೆಯ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತರ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಯಿತು. ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದಾರೆ, ಇದನ್ನು ಹೇಗೆ ಕೌಂಟರ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ಲಿಂಗಾಯತ ಸಿಎಂ ಬಗ್ಗೆಯೂ ಕೆಲವರು ಸಲಹೆ ಕೊಟ್ಟರು. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಭಾಗಿಯಾಗಿದ್ದರು. ಅವರು ಹೈಕಮಾಂಡ್ಗೆ ಸಭೆಯ ಭಾವನೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ನಿರ್ಣಯ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನದ್ದು ಲಿಂಗಾಯತ ವಿರೋಧಿ ನಡೆ. ಅವರಿಗೆ 1967 ರಿಂದ ಈವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತ ಸಿಎಂ ಮಾಡಕ್ಕಾಗಲಿಲ್ಲ. ಈ ನಡುವೆ ವಿರೇಂದ್ರ ಪಾಟೀಲರಿಗೆ ಒಂಬತ್ತು ತಿಂಗಳು ಅಧಿಕಾರ ಕೊಟ್ಟು ನಂತರ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಏರ್ಪೋರ್ಟ್ನಲ್ಲೇ ಅವರನ್ನು ತೆಗೆದು ಹಾಕಿದರು. ರಾಜಶೇಖರ ಮೂರ್ತಿ ಅವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ. ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಹೋಗಿತ್ತು. ಮತ ಬ್ಯಾಂಕ್ಗಾಗಿ ಧರ್ಮ ಒಡೆಯಲು ಹೋಗಿದ್ದರು. ಜನ ಇದನ್ನೆಲ್ಲ ಮರೆಯಲ್ಲ, ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪ್ರಚಾರ ಮಿಲಿಟರಿ ಹೋಟೆಲ್ನಿಂದಲೇ ಆರಂಭವಾಗಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನ ಇರ್ತಾರೆ ಅಂತಲೇ ಡಿಕೆಶಿ ಅವರನ್ನು ಭೇಟಿ ಮಾಡಲ್ಲ. ಅಂತಹ ಸಾಮಾನ್ಯ ಜನರನ್ನು ಭೇಟಿ ಮಾಡೋದಕ್ಕೆ ಅಶೋಕ್ ಮಿಲಿಟರಿ ಹೋಟೆಲ್ಗೆ ಹೋಗಿದ್ದಾರೆ. ಇದರಲ್ಲಿ ಏನ್ ತಪ್ಪಿದೆ? ಯಾಕೆ ಮಿಲಿಟರಿ ಹೋಟೆಲ್ಗೆ ಹೋಗಬಾರದು? ಎಂದು ಅಶೋಕ್ ಕನಕಪುರದಲ್ಲಿ ಮಿಲಿಟರಿ ಹೋಟೆಲ್ಗೆ ಬಂದು ಹೋಗಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಟಕ್ಕರ್ ನೀಡಿದರು.